Wednesday, October 22, 2025

ಅಡಕೆ ಬೆಳೆಗಾರರಿಗೆ ಮತ್ತೆ WHO ಶಾಕ್: ‘ಕ್ಯಾನ್ಸರ್ ಕಾರಕ’ ಹಣೆಪಟ್ಟಿ, ದಶಕಗಳ ವಿವಾದಕ್ಕೆ ಹೊಸ ತಿರುವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಅಡಕೆ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದು, ಅದನ್ನು ಕ್ಯಾನ್ಸರ್ ಕಾರಕ ವಸ್ತುವೆಂದು ಘೋಷಿಸಿ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ಕರೆ ನೀಡಿದೆ. ಇದು ಲಕ್ಷಾಂತರ ಅಡಕೆ ಬೆಳೆಗಾರರ ಮೇಲೆ ಬಲವಾದ ಆರ್ಥಿಕ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿದೆ.

ಕಳೆದ ಏಳು ದಶಕಗಳಿಂದಲೂ ಅಡಕೆ ಬಳಕೆಯ ಬಗ್ಗೆ ಒಂದಲ್ಲ ಒಂದು ವಿವಾದವನ್ನು ಎತ್ತುತ್ತಿರುವ WHO, ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಏಷ್ಯಾ ಒಕ್ಕೂಟದ ರಾಷ್ಟ್ರಗಳ ಸಮಾವೇಶದಲ್ಲಿ ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಆರೋಗ್ಯದ ಅಪಾಯ ಮತ್ತು WHO ವಾದ
ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತ, ಬಾಂಗ್ಲಾದೇಶ, ಭೂತಾನ್, ಉತ್ತರ ಕೊರಿಯಾ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ಟೀಮೋರ್ ಲೆಸ್ಟೆ ರಾಷ್ಟ್ರಗಳು ಹೊಗೆರಹಿತ ತಂಬಾಕು, ನಿಕೋಟಿನ್ ಮತ್ತು ಇತರ ಅಪಾಯಕಾರಿ ಉತ್ಪನ್ನಗಳ ಬಳಕೆಯಿಂದಾಗುವ ಆರೋಗ್ಯದ ಹಾನಿಯ ಬಗ್ಗೆ ಚರ್ಚಿಸಿದವು. ಈ ಪಟ್ಟಿಗೆ WHO ಈಗ ಅಡಕೆಯನ್ನು ಸಹ ಸೇರಿಸಿದೆ.

ಒಕ್ಕೂಟದ ಈ ರಾಷ್ಟ್ರಗಳಲ್ಲಿ ಸುಮಾರು 28 ಕೋಟಿ ವಯಸ್ಕರು ಮತ್ತು 1.1 ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳಿಗೆ ವ್ಯಸನಿಗಳಾಗಿದ್ದಾರೆ. ಇವು ಬಾಯಿ ಕ್ಯಾನ್ಸರ್ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಿದ್ದು, ಸಾರ್ವಜನಿಕ ಆರೋಗ್ಯ, ಮರಣ ಪ್ರಮಾಣ ಮತ್ತು ಸಾಮಾಜಿಕ-ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು WHO ಒತ್ತಾಯಿಸಿದೆ.

ಏಷ್ಯಾ ಒಕ್ಕೂಟದ ಸಮ್ಮತಿ
WHO ಮಾಡಿದ ಈ ಮನವಿಗೆ ಆಗ್ನೇಯ ಏಷ್ಯಾ ಒಕ್ಕೂಟದ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ ಎಂದು ವರದಿಯಾಗಿದೆ. ಈ ಉತ್ಪನ್ನಗಳ ಬಳಕೆಯನ್ನು ತಡೆಯಲು ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ನೀತಿ ಆಧಾರಿತ ಕಾರ್ಯತಂತ್ರಗಳನ್ನು ರೂಪಿಸಲು ಈ ರಾಷ್ಟ್ರಗಳು ಒಪ್ಪಿಕೊಂಡಿವೆ.

ದಶಕಗಳ ವಿವಾದ: ಭಾರತದ ಮುಂದಿರುವ ಸವಾಲು
ಅಡಕೆ ನಿಷೇಧದ ಕುರಿತು WHO ಈ ಹಿಂದೆ 2006ರಲ್ಲಿ ಪಶ್ಚಿಮ ಪೆಸಿಫಿಕ್ ರಾಷ್ಟ್ರಗಳಿಗೆ ಇದೇ ರೀತಿಯ ಸೂಚನೆಯನ್ನು ನೀಡಿತ್ತು, ಆದರೆ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಅಡಕೆಗೆ ಕ್ಯಾನ್ಸರ್ ಕಾರಕ ವಸ್ತು ಎಂಬ ಹಣೆಪಟ್ಟಿ ನೀಡುವ WHO ನಿಲುವನ್ನು ಭಾರತದ ಅಡಕೆ ಬೆಳೆಗಾರರ ಸಹಕಾರಿ ಸಂಘಗಳು ಮತ್ತು ಕೆಲವು ಸಂಶೋಧಕರು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ.

ಅಡಕೆಯ ಗುಣಲಕ್ಷಣಗಳ ಬಗ್ಗೆ ಭಾರತದಲ್ಲಿ ಪ್ರಸ್ತುತ ಹೆಚ್ಚಿನ ಅಧ್ಯಯನಗಳು ನಡೆಯುತ್ತಿದ್ದು, ಕ್ಯಾನ್ಸರ್ ಮತ್ತು ಅಡಕೆಯ ನಡುವಿನ ನೇರ ಸಂಬಂಧವನ್ನು ವೈಜ್ಞಾನಿಕವಾಗಿ ಪ್ರಶ್ನಿಸಲು ಭಾರತ ಸರ್ಕಾರ ಈ ಸಂಶೋಧನಾ ವರದಿಗಳನ್ನೇ ಪ್ರಮುಖ ಅಸ್ತ್ರವಾಗಿ ಬಳಸಬೇಕಾದ ತುರ್ತು ಎದುರಾಗಿದೆ. ಅಡಕೆ ನಿಷೇಧದ WHO ಕರೆಯನ್ನು ಭಾರತ ಹೇಗೆ ಎದುರಿಸಲಿದೆ ಎಂಬುದು ಈಗ ಕುತೂಹಲಕಾರಿಯಾಗಿದೆ.

error: Content is protected !!