ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಭಾರತ ರಾಯಭಾರ ಕಚೇರಿಯನ್ನು ಪುನಾರಂಭಿಸಿದೆ. ಅನೌಪಚಾರಿಕವಾಗಿ ಅಲ್ಲಿ ಇದ್ದ ತನ್ನ ಟೆಕ್ನಿಕಲ್ ಮಿಷನ್ ಅನ್ನು ರಾಯಭಾರ ಕಚೇರಿಯಾಗಿ ಮಾರ್ಪಡಿಸಿದೆ. ಇದರೊಂದಿಗೆ ಅಫ್ಗಾನಿಸ್ತಾನ ದೇಶದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ನಾಲ್ಕು ವರ್ಷಗಳ ನಂತರ ಮರಳಿ ಸ್ಥಾಪನೆಯಾದಂತಾಗಿದೆ.
ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಕಿ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜತಾಂತ್ರಿಕ ಸಂಬಂಧ ಮರಳಿ ಸ್ಥಾಪಿಸುವುದು ಒಳಗೊಂಡಂತೆ ವಿವಿಧ ವಿಚಾರಗಳನ್ನು ಚರ್ಚಿಸಿದ್ದರು. ಇದರ ಬೆನ್ನಲ್ಲೇ ಭಾರತದಿಂದ ಈ ನಡೆ ಬಂದಿದೆ.
ಭಾರತದ ಟೆಕ್ನಿಕಲ್ ಮಿಷನ್ ಎಂದರೇನು?
2021ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಅಧಿಕಾರಕ್ಕೆ ಬಂದಿತು. ಅಲ್ಲಿಯವರೆಗೆ ಕಾಬೂಲ್ನಲ್ಲಿ ಭಾರತದ ರಾಯಭಾರ ಕಚೇರಿ ಇತ್ತು. ತಾಲಿಬಾನ್ ಆಗಮನದ ಬಳಿಕ ಕಾಬೂಲ್ನಲ್ಲಿರುವ ರಾಯಭಾರ ಕಚೇರಿಯನ್ನು ಭಾರತ ಬಂದ್ ಮಾಡಿತು. 2022ರಲ್ಲಿ ಟೆಕ್ನಿಕಲ್ ಮಿಷನ್ ಮಾತ್ರವೇ ಸ್ಥಾಪಿಸಿತು. ಇದಕ್ಕೆ ರಾಜತಾಂತ್ರಿಕ ಮಟ್ಟದ ಅಧಿಕಾರ ಮತ್ತು ಸ್ಥಾನ ಇರಲಿಲ್ಲ. ಔಷಧ ಇತ್ಯಾದಿ ಅಗತ್ಯ ಮಾನವೀಯ ಸೇವೆಗಳನ್ನು ಕೈಗೊಳ್ಳಲು ಮಾತ್ರವೇ ಈ ಟೆಕ್ನಿಕಲ್ ಮಿಷನ್ ಸೀಮಿತವಾಗಿತ್ತು.

