ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ನಗರದಾದ್ಯಂತ ಮೋಡ ಕವಿದ ವಾತಾವರಣವಿದ್ದು, ಶೀತ ಗಾಳಿಯೊಂದಿಗೆ ತುಂತುರು ಮಳೆ ಬಿಟ್ಟುಬಿಡದೇ ಸುರಿಯುತ್ತಿದೆ. ಇದರಿಂದ ಬೆಂಗಳೂರು ಮಲೆನಾಡಿನಂತೆ ಕಂಗೊಳಿಸುತ್ತಿದ್ದು, ಚುಮುಚುಮು ಚಳಿ ಹಾಗೂ ನಿರಂತರ ಜಿಟಿಜಿಟಿ ಮಳೆಯು ನಗರದಲ್ಲಿ ಊಟಿ ವಾತಾವರಣವನ್ನು ಸೃಷ್ಟಿಸಿದೆ.
ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಜನರಿಗೆ ಮಳೆಯು ತಂಪಾದ ಅನುಭವ ನೀಡಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಇಂದು ಸಹ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ 13 ಜಿಲ್ಲೆಗಳಿಗೆ ತೀವ್ರ ಮಳೆಯ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ವಾತವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಬೆಂಗಳೂರಿನ ಜನರು ಇನ್ನಷ್ಟು ದಿನಗಳ ಕಾಲ ಈ ಆಹ್ಲಾದಕರ ಮಳೆ ಮತ್ತು ಚಳಿಯ ಅನುಭವವನ್ನು ಪಡೆಯಲಿದ್ದಾರೆ.