ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿರುವಾಗಲೇ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಪಟಾಕಿ ಅವಘಡಗಳು ಆತಂಕವನ್ನು ಸೃಷ್ಟಿಸಿವೆ. ಕಳೆದ ಕೆಲವು ದಿನಗಳಿಂದ ಪಟಾಕಿಗಳಿಂದ ಗಾಯಗೊಂಡವರ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಒಂದೇ ದಿನ 150ಕ್ಕೂ ಹೆಚ್ಚು ಕಣ್ಣಿನ ಹಾನಿ ಪ್ರಕರಣಗಳು ದಾಖಲಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಗಮನಿಸಬೇಕಾದ ಅಂಶವೆಂದರೆ, ಶೇ 60% ರಷ್ಟು ಪ್ರಕರಣಗಳು ಪಟಾಕಿ ನಿಂತು ನೋಡುವಾಗ ಕಣ್ಣಿಗೆ ಹಾನಿಯಾದ ಘಟನೆಗಳೇ ಎಂದು ದೃಢಪಟ್ಟಿದೆ. ಹಬ್ಬದ ಈ ಸುಸಂದರ್ಭದಲ್ಲಿ ಪಟಾಕಿಗಳ ಅವಾಂತರದಿಂದ ಎಂಟು ಮಂದಿ ಶಾಶ್ವತ ದೃಷ್ಟಿ ಕಳೆದುಕೊಂಡಿದ್ದಾರೆ. ಅವರಲ್ಲಿ ಮೂವರು ಬಾಲಕರಿದ್ದಾರೆ.
ದುರಂತ ಕಥೆಗಳು:
ಕನ್ನಡಕವೂ ರಕ್ಷಿಸಲಿಲ್ಲ:
ಬೆಂಗಳೂರಿನ ಕತ್ರಿಗುಪ್ಪೆಯ 11 ವರ್ಷದ ವಿದ್ಯಾರ್ಥಿ ಪಟಾಕಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸಿಡಿದ ಪಟಾಕಿ ನೇರವಾಗಿ ವಿದ್ಯಾರ್ಥಿಯ ಕನ್ನಡಕಕ್ಕೆ ಅಪ್ಪಳಿಸಿ, ಕನ್ನಡಕ ಒಡೆದು ಅದರ ಚೂರುಗಳು ಕಣ್ಣಿನೊಳಗೆ ಪ್ರವೇಶಿಸಿವೆ. ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ, ದುರದೃಷ್ಟವಶಾತ್ ಆ ಮಗುವಿನ ದೃಷ್ಟಿಯನ್ನು ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರು ಆಘಾತಕ್ಕೊಳಗಾಗಿದ್ದಾರೆ.
5 ವರ್ಷದ ಮಗುವಿಗೆ ಶಾಶ್ವತ ಹಾನಿ:
ಚಿಕ್ಕಬಳ್ಳಾಪುರದ ಐದು ವರ್ಷದ ಹೆಣ್ಣುಮಗುವಿನ ಕಥೆ ಮತ್ತಷ್ಟು ಹೃದಯ ವಿದ್ರಾವಕವಾಗಿದೆ. ಈಕೆ ಪಟಾಕಿ ನೋಡುತ್ತಿದ್ದಾಗ ಬಿಜಿಲಿ ಪಟಾಕಿ ಸಿಡಿದು ಬಲಕಣ್ಣಿಗೆ ತೀವ್ರ ಗಾಯವಾಗಿದೆ. ಕರಿಗುಡ್ಡೆ (ಕಾರ್ನಿಯಾ) ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಮಗು ದೃಷ್ಟಿ ಕಳೆದುಕೊಂಡಿದೆ. ಮಗುವಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ, ಭವಿಷ್ಯದಲ್ಲಿ ದೃಷ್ಟಿ ಮರಳಿ ಬರುವ ಸಾಧ್ಯತೆ ಅಸ್ಪಷ್ಟವಾಗಿದೆ.
ರಸ್ತೆ ಬದಿಯಲ್ಲಿ ನಡೆವವರಿಗೂ ಅಪಾಯ:
ಸಿದ್ಧಾಪುರದ ಪಿಯುಸಿ ವಿದ್ಯಾರ್ಥಿಯೊಬ್ಬ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಟಾಕಿ ಸಿಡಿದು ಕಣ್ಣಿಗೆ ತೀವ್ರ ಗಾಯವಾಗಿದೆ. ಕೆಲವು ಯುವಕರು ಕಲ್ಲಿನ ಮೇಲೆ ಪಟಾಕಿ ಇಟ್ಟು ಸಿಡಿಸಿದ್ದರಿಂದ ಸ್ಫೋಟದ ತೀವ್ರತೆ ಹೆಚ್ಚಾಗಿತ್ತು. ನಿರ್ಲಕ್ಷ್ಯ ತೋರಿದವರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿದ್ಯಾರ್ಥಿಯೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವೈದ್ಯರು ಮತ್ತು ಪೋಷಕರು, ಹಬ್ಬದ ಸಂಭ್ರಮದಲ್ಲಿ ಯಾರಿಗೂ ಹಾನಿಯಾಗದಂತೆ ಪಟಾಕಿ ಸುರಕ್ಷತೆ ಕುರಿತು ತೀವ್ರ ಎಚ್ಚರಿಕೆಯನ್ನು ನೀಡಿದ್ದಾರೆ.