ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಿ ಮುಂಬೈನ ಡಾ. ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ ಮಹತ್ವದ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ‘ಮಾಡು ಇಲ್ಲವೇ ಮಡಿ’ ಎನ್ನುವಂತಿದ್ದ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಶ್ರೇಷ್ಠ ಆಟದ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಮಳೆ ಅಡ್ಡಿಪಡಿಸಿದರೂ ಭಾರತೀಯ ಬ್ಯಾಟರ್‌ಗಳ ದಾಳಿಯು ಕಿವೀಸ್ ಬೌಲರ್‌ಗಳನ್ನು ಸಂಪೂರ್ಣ ಕಂಗೆಡಿಸಿತು. ಭಾರತದ ಬೌಲಿಂಗ್ ದಾಳಿಯೂ ಅದೇ ರೀತಿ ಮಿಂಚಿ, ನ್ಯೂಜಿಲೆಂಡ್ ತಂಡವನ್ನು 274 ರನ್‌ಗಳಲ್ಲೇ ಸೀಮಿತಗೊಳಿಸಿತು.
ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ 49 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಭರ್ಜರಿ 340 ರನ್‌ಗಳ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಸ್ಮೃತಿ ಮಂಧಾನ ಶತಕ (109) ಹಾಗೂ ಪ್ರತಿಕಾ ರಾವಲ್ (122) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರ ಜೊತೆಗೆ ಜೆಮಿಮಾ ರೋಡ್ರಿಗಸ್ ವೇಗದ 76 ರನ್‌ಗಳೊಂದಿಗೆ ಭಾರತದ ಮೊತ್ತಕ್ಕೆ ಮೆರುಗು ನೀಡಿದರು. ಮಳೆ ಕಾರಣದಿಂದ ಒಂದು ಓವರ್ ಕಡಿತಗೊಂಡ ನಂತರ ಪಂದ್ಯ 49 ಓವರ್‌ಗಳಿಗೆ ನಿರ್ಧರಿಸಲಾಯಿತು.
ಡಿಎಲ್‌ಎಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 44 ಓವರ್‌ಗಳಲ್ಲಿ 325 ರನ್ ಅಗತ್ಯವಿತ್ತು. ಆದರೆ ಭಾರತ ಬೌಲರ್ಸ್ ಶ್ರೇಷ್ಠ ಪ್ರದರ್ಶನ ನೀಡಿದರು. ರೇಣುಕಾ ಠಾಕೂರ್ ಮತ್ತು ಕ್ರಾಂತಿ ಗೌಡ್ ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಪ್ರತಿಕಾ ರಾವಲ್ ಮತ್ತು ಶ್ರೀಚರಣಿ ತಲಾ ಒಂದು ವಿಕೆಟ್ ಕಿತ್ತುಕೊಂಡರು.
ನ್ಯೂಜಿಲೆಂಡ್ ಪರ ಬ್ರೂಕ್ ಹಾಲಿಡೆ 81 ರನ್ ಹಾಗೂ ಇಸಬೆಲ್ಲಾ ಗಾಝಾ ಅಜೇಯ 65 ರನ್ ಗಳಿಸಿ ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಾರಿಯತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ವಿಶ್ವಕಪ್ ಸೆಮಿಫೈನಲ್‌ಗೆ ನಾಲ್ಕನೇ ತಂಡವಾಗಿ ಪ್ರವೇಶಿಸಿತು. ಈಗಾಗಲೇ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಟಾಪ್ 3 ಸ್ಥಾನಗಳನ್ನು ಪಡೆದಿವೆ. ಭಾರತ ಮುಂದಿನ ಹಂತದಲ್ಲಿ ಗೆಲುವಿನ ಲಯ ಮುಂದುವರಿಸಲು ಸಜ್ಜಾಗಿದೆ.

