Wednesday, November 5, 2025

ಸಪ್ತ ಸಾಗರದಾಚೆಗೂ ದೀಪಾವಳಿ ಸಂಭ್ರಮ: ಹಬ್ಬದ ಖುಷಿಯಲ್ಲಿ ಮಿಂದಿದ್ದರು ನೈಜೀರಿಯಾದಲ್ಲಿ ನಮ್ಮೂರ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತೋರ್ಮ ಅಮೃತಂಗಮಯ’ ಎಂಬ ಬ್ರಹದಾರಣ್ಯ ಉಪನಿಷತ್ತಿನ ನುಡಿಯಂತೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂದೇಶವನ್ನು ಸಾರುವ ದೀಪಾವಳಿ ಹಬ್ಬವನ್ನು ಇಡೀ ಜಗತ್ತು ಸಡಗರ ಸಂಭ್ರಮದಿಂದ ಆಚರಿಸುತ್ತದೆ. ಈ ಭಾರತೀಯ ಪರಂಪರೆಯನ್ನು ಉದ್ಯೋಗ ನಿಮಿತ್ತ ಏಳು ಕಡಲು ದಾಟಿ ಆಫ್ರಿಕಾದ ನೈಜೀರಿಯಾ ದೇಶದಲ್ಲಿ ನೆಲೆಸಿರುವ ನಮ್ಮ ಮಂಗಳೂರಿನ ಕನ್ನಡಿಗರು ಅಷ್ಟೇ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿರುವುದು ನಾಡಿಗೆ ಹೆಮ್ಮೆ ತಂದಿದೆ.

ಪರದೇಶದಲ್ಲೂ ಕರ್ನಾಟಕದ ಸಂಸ್ಕೃತಿ:

ಮಂಗಳೂರಿನ ಹರಿದಾಸರು, ಧಾರ್ಮಿಕ ಮುಂದಾಳು ಶರತ್ ಶೆಟ್ಟಿ ಪಡುಪಳ್ಳಿ ಅವರ ನೇತೃತ್ವದಲ್ಲಿ ತುಳು ಮತ್ತು ಕನ್ನಡದವರನ್ನು ಒಟ್ಟುಗೂಡಿಸಿ ರಚಿಸಲಾದ “ಕರ್ನಾಟಕ ಸಂಘ ಕಾನೋ” ಈ ಆಚರಣೆಯ ಕೇಂದ್ರಬಿಂದುವಾಗಿದೆ. ಈ ಸಂಘವು ನೈಜೀರಿಯಾದ ಕಾನೋ ನಗರದಲ್ಲಿ ಅನ್ನದಾನ, ಸಾಮಾಜಿಕ ಸೇವೆಗಳಂತಹ ಜನಸೇವೆಗಳ ಜೊತೆಗೆ ಬಿಸು, ಅಷ್ಟಮಿ, ತುಳಸಿ ಪೂಜೆ, ಕನ್ನಡ ರಾಜ್ಯೋತ್ಸವ ಸೇರಿದಂತೆ ನಮ್ಮ ಎಲ್ಲ ಹಬ್ಬಗಳನ್ನು ಅಚ್ಚುಕಟ್ಟಾಗಿ ಆಚರಿಸಿಕೊಂಡು ಬರುತ್ತಿದೆ.

ಲಕ್ಷ್ಮೀ ಪೂಜೆ, ಬಾಳೆ ಎಲೆ ಊಟದ ಸಂಭ್ರಮ:

ಇತ್ತೀಚೆಗೆ ನಡೆದ ದೀಪಾವಳಿ ಹಬ್ಬವನ್ನು ‘ಕರ್ನಾಟಕ ಸಂಘ ಕಾನೋ’ ಸಾಂಪ್ರದಾಯಿಕವಾಗಿ ಆಚರಿಸಿತು. ಲಕ್ಷ್ಮೀ ಪೂಜೆ ಮತ್ತು ಭಜನೆಯೊಂದಿಗೆ ಪೂಜಾ ಕೈಂಕರ್ಯಗಳು ನೆರವೇರಿದವು. ಸಂಘದ ಸದಸ್ಯರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬಂದಿದ್ದ ವಿವಿಧ ಬಗೆಯ ತರಕಾರಿ ಊಟ ಮತ್ತು ಖಾದ್ಯಗಳನ್ನು ನೆಲದ ಮೇಲೆ ಕುಳಿತು ಬಾಳೆಯೆಲೆಯಲ್ಲಿ ಸವಿದರು. ಶರತ್ ಶೆಟ್ಟಿ ಪಡುಪಳ್ಳಿ ಅವರು ಪೂಜೆಯನ್ನು ನೆರವೇರಿಸಿದರು.


ನಂತರ ಎಲ್ಲರೂ ಸೇರಿ ಪಟಾಕಿ, ಬರ್ಸ, ದುರ್ಸು, ನೆಲಚಕ್ರಗಳನ್ನು ಸಿಡಿಸಿ ಸಂತೋಷ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ್ ಛಾಯಾ, ಸತೀಶ್ ದೀಪ್ತಿ, ಸುಜಿತ್ ಜ್ಯೋತಿ, ಕೇತಾನ್-ಡಾ. ಶ್ರಾವ್ಯ ಶೆಟ್ಟಿ, ಮಹೇಶ್, ಶ್ರೇಯಾ, ದೇವರಾಜ್ ಪಾವನಾ, ಮಹಂತೇಶ್-ಮಧು, ಕೌಶಲ್ಯಾ-ಶೈಲೇಶ್, ಭಾವಿಕ್-ಕವಿತಾ, ರೂಪೇಶ್-ಲಿಡಿಯಾ, ಸುಕೇಶ್ – ಪ್ರತೀಕ್ಷಾ ಮತ್ತು ಪ್ರಯುಶ್, ರಾಧಾಕ್ರಷ್ಣ ಕೋಟ್ಯಾನ್, ಶ್ರೀಕಾಂತ್ ಸೇರಿದಂತೆ ಹಿರಿಯರು ಮತ್ತು ಮಕ್ಕಳಾದ ಬಿನಾಯ್, ಸಿಯಾ, ಮಯಾಂಕ್, ರೆಯಾಂಶ್, ಪ್ರೀತ್, ಮಾನ್ವೀ, ಪ್ರಾಪ್ತಿ ತಕ್ಷಿಲ್, ಜಿಯಾನ್, ಖುಷಿ ಎಲ್ಲರೂ ಒಂದೊಂದು ದೀಪ ಹಚ್ಚುವ ಮೂಲಕ ಹಬ್ಬಕ್ಕೆ ಅರ್ಥ ತುಂಬಿದರು.

ಊರು ಬಿಟ್ಟು ದೂರವಿದ್ದರೂ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚರಣೆ, ಕಟ್ಟುಕಟ್ಟಳೆ, ಪೂಜೆ ಪುರಸ್ಕಾರಗಳನ್ನು ತಿಳಿಸುವ ಈ ಪ್ರಯತ್ನ ಶ್ಲಾಘನೀಯವಾಗಿದೆ.

‘ಹೊಸ ದಿಗಂತ’ ಈ ‘ಕರ್ನಾಟಕ ಸಂಘ ಕಾನೋ’ ಕೂಟಕ್ಕೆ ಇನ್ನಷ್ಟು ಒಗ್ಗಟ್ಟು ಮತ್ತು ಏಳಿಗೆ ಲಭಿಸಲಿ ಎಂದು ಆಶಿಸುತ್ತಿದೆ.

error: Content is protected !!