ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮೂವರು ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು,ಸಿಎಂ ಮಜಾವಾದಿ, ಡಿಸಿಎಂ ಡಿ.ಕೆ. ಶಿವಕುಮಾರ ಪವರ್ ಗ್ರಾಬಿಂಗ್’ನಲ್ಲಿ ನಿರತರಾಗಿದ್ದಾರೆ. ಇನ್ನು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಏನೇ ಕೇಳಿದರೂ ಗೊತ್ತಿಲ್ಲ, ವರದಿ ಪಡೆದು ಹೇಳುತ್ತೇನೆ ಎನ್ನುತ್ತಾರೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಎನ್ನುವುದೇ ಇಲ್ಲ ಎಂದು ಹರಿಹಾಯ್ದರು.
ಸಂಘದ ಹಣದ ಮಾಹಿತಿ ಪಡೆಯಲು ಬೇರೆ ಬೇರೆ ಸಂಸ್ಥೆಗಳಿವೆ. ಅವರ ಪಕ್ಷದ್ದೇ ಊರ ಬಾಗಿಲು ಆಗಿದೆ. ಇನ್ನೊಬ್ಬರ ಮನೆ ಬಾಗಿಲು ಏನು ನೋಡುತ್ತಾರೆ ಎಂದು ತಿರುಗೇಟು ನೀಡಿದರು.
ಇನ್ನು ಆರ್‌ಎಸ್‌ಎಸ್ ನೋಂದಣಿ ಪ್ರಶ್ನಿಸುವ ಕಾಂಗ್ರೆಸ್ ಮೊದಲು ಸಂವಿಧಾನದ ಯಾವ ಕಾನೂನಿನಲ್ಲಿ ನೋಂದಣಿ ಕಡ್ಡಾಯವಿದೆ ಎನ್ನುವುದನ್ನು ಹೇಳಲಿ. ಯಾರು ಬೇಕಾದರೂ ಯಾವುದೇ ಸಂಘಟನೆ ಆರಂಭಿಸಬಹುದು, ನೋಂದಣಿ ಕಡ್ಡಾಯವಲ್ಲ. ಈ ವರೆಗೆ ಸಂಘ ಯಾವುದೇ ನಿವೇಶನ, ಕಟ್ಟಡ ಹೊಂದಿಲ್ಲ, ಕೆಲವೆಡೆ ಕಟ್ಟವಿದ್ದರೂ ಅದು ಅಲ್ಲಿನ ಸ್ಥಳೀಯ ನಾಯಕರ ಹೆಸರಿನಲ್ಲಿ ಇದೆ ಎಂದರು.
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಪಕ್ಕಾ, ಇದಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಜಾರಕಿಹೊಳಿ ಮುಂದಿನ ಸಿಎಂ ಎಂದು ಹೇಳಿರುವುದೇ ಸಾಕ್ಷಿ. ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಏನೋ ಚರ್ಚೆ ಆಗಿದೆ, ಅದನ್ನು ಯತೀಂದ್ರ ಹೇಳಿದ್ದಾರೆ. ಹೀಗಾಗಿ, ಟೆಂಪಲ್ ರನ್ ಮಾಡುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ ಹರಕೆಯ ಕುರಿ ಆಗಲಿದ್ದಾರೆ ಎಂದು ಕಟುಕಿದರು.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪ್ರತಿಯಾಗಿ ಭೀಮ್ ಆರ್ಮಿ ತಮಗೂ ಅನುಮತಿ ನೀಡುವಂತೆ ಕೋರಿದ ಕುರಿತು ಪ್ರತಿಕ್ರಿಯಿಸಿ, ಯಾರಿಗೆ ಬೇಕಾದರೂ ಕಾರ್ಯಕ್ರಮ ಮಾಡಲು ಮತ್ತು ಪಥ ಸಂಚಲನಕ್ಕೆ ಅನುಮತಿ ನೀಡಲಿ, ದಲಿತ, ಲಿಂಗಾಯತ, ಒಕ್ಕಲಿಗರು ಯಾರೇ ಮೆರೆವಣಿಗೆ ಮಾಡಲಿ ನಮ್ಮ ಅಭ್ಯಂತರವಿಲ್ಲ ಎಂದರು.
ಬಿಜೆಪಿ-ಜೆಡಿಎಸ್ ಭಿನ್ನಮತ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ನಾವಿಬ್ಬರು ಹಾಲು ಜೇನಿನಂತೆ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ, ಮುಂದಿನ ಚುನಾವಣೆ ಕುರಿತಂತೆ ಸಮನ್ವಯ ಸಾಧಿಸಲು ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಆ ಕುರಿತಂತೆ ಪಕ್ಷದ ವರಿಷ್ಠರು ಚರ್ಚೆ ಮಾಡಲಿದ್ದಾರೆ ಎಂದರು.

