ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಕುರಿತು ಅಕ್ಟೋಬರ್ 28ರಂದು ಎಲ್ಲಾ 8 ಸಂಘಟನೆಗಳ ಜೊತೆಗೆ ಶಾಂತಿ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಕಲಬುರಗಿಯ ಹೈಕೋರ್ಟ್ ಪೀಠ ಮಹತ್ವದ ಸೂಚನೆ ನೀಡಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನು ಅ.30ಕ್ಕೆ ಮುಂದೂಡಿದೆ.
ಆರ್‌ಎಸ್‌ಎಸ್ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಮತ್ತೊಂದೆಡೆ 5 ಸಂಘಟನೆಗಳು ಅಂದೇ ನಮಗೂ ಅವಕಾಶ ಕೊಡಿ ಎಂದು ಅರ್ಜಿ ಹಾಕಿದ್ದವು. ಈ ಮಧ್ಯೆ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ಕಲಬುರಗಿಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಏಕ ಸದಸ್ಯ ಪೀಠದಲ್ಲಿ ನಡೆಯಿತು.
ಜಿಲ್ಲಾಡಳಿತದ ಪರವಾಗಿ ಎಜಿ ಶಶಿಕಿರಣ್ ವಾದ ಮಂಡಿಸಿ ಸದ್ಯ ಪಥಸಂಚಲನಕ್ಕೆ ಅನುಮತಿ ಬೇಡ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ. ಹೀಗಾಗಿ ಇನ್ಮಷ್ಟು ಕಾಲಾವಕಾಶ ಕೊಡಬೇಕು ಅಂತ ವಾದ ಮಂಡಿಸಿದ್ದರು. ಈ ವೇಳೆ ಆರ್ ಎಸ್‌ಎಸ್ ಪರ ಹಿರಿಯ ವಕೀಲ್ ಅರುಣ್ ಶ್ಯಾಂ ವಾದ ಮಂಡಿಸಿ, ಈಗಾಗಲೇ ನ್ಯಾಯಲಯ ಸೂಚಿಸಿದಂತೆ ನವೆಂಬರ್ 2ರಂದು ಅನುಮತಿಗೆ ನಾವು ಕಾಯುತ್ತಿದ್ದೇವೆ. ಆದರೆ ದಿನ ಕಳೆದಂತೆ ಉದ್ದೇಶ ಪೂರ್ವಕವಾಗಿ ಅರ್ಜಿಗಳು ಸಲ್ಲಿಕೆಯಾಗಿ ಕಾಲಹರಣ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಸಮಸ್ಯೆಯಿದ್ರೆ ಕೇಂದ್ರದಿಂದ ಹೆಚ್ಚಿನ ಭದ್ರತೆ ತರಿಸಿಕೊಳ್ಳಲ್ಲಿ ಅಂತ ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಅಕ್ಟೋಬರ್ 28ಕ್ಕೆ ಎಲ್ಲಾ 8 ಸಂಘಟನೆಗಳ ಜೊತೆ ಶಾಂತಿ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತು. ಅಲ್ಲದೆ, ಅಕ್ಟೋಬರ್ 30ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದ್ದಾರೆ.

