Friday, November 7, 2025

ಕಿಂಗ್ ಕೊಹ್ಲಿಗೆ ಶುರುವಾಗಿದೆ ‘ಶೂನ್ಯಾತಂಕ’: ಸಿಡ್ನಿಯಲ್ಲಿ ಇತಿಹಾಸ ಸೃಷ್ಟಿಯಾಗುವುದೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಶಕಗಳ ಕಾಲ ವಿಶ್ವ ಕ್ರಿಕೆಟ್ ಅನ್ನು ಆಳಿದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸವು ಕಠಿಣ ಸವಾಲೊಡ್ಡಿದೆ. ಬರೋಬ್ಬರಿ 7 ತಿಂಗಳ ದೀರ್ಘ ವಿರಾಮದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ವಿರಾಟ್ ಕೊಹ್ಲಿ, ಸತತ ಎರಡು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗುವ ಮೂಲಕ ‘ಶೂನ್ಯಾತಂಕ’ದ ಭೀತಿಯನ್ನು ಎದುರಿಸುತ್ತಿದ್ದಾರೆ.

ಈಗ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಸೊನ್ನೆಗೆ ಔಟಾದರೆ, ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಯಾರಿಗೂ ಬೇಡವಾದ ದಾಖಲೆಗೆ ಕೊರಳೊಡ್ಡಲಿದ್ದಾರೆ. ಕ್ರಿಕೆಟ್ ಲೋಕದಲ್ಲಿ ನೂರಾರು ದಾಖಲೆಗಳ ಸರದಾರನಾಗಿರುವ ಕೊಹ್ಲಿ, ಕೊನೆಯ ಪಂದ್ಯದಲ್ಲಿ ಡಕೌಟ್ ಆಗದೆ, ವಿಶ್ವ ಕ್ರಿಕೆಟ್​ನ ಮುಂದೆ ಮುಜುಗರಕ್ಕೊಳಗಾಗದಿರಲಿ ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಶಯವಾಗಿದೆ.

ಹ್ಯಾಟ್ರಿಕ್ ಸೊನ್ನೆ ಸುತ್ತುವ ಭಯದಲ್ಲಿ ಕೊಹ್ಲಿ
ಅಕ್ಟೋಬರ್ 25 ರ ಶನಿವಾರದಂದು ಸಿಡ್ನಿಯಲ್ಲಿ ನಡೆಯುವ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರೆ, ಸತತ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

ಇದಕ್ಕೂ ಮೊದಲು, ಸೂರ್ಯಕುಮಾರ್ ಯಾದವ್, ಅನಿಲ್ ಕುಂಬ್ಳೆ, ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಅವರಂತಹ ಆಟಗಾರರು ಮೂರು ಬಾರಿ ಶೂನ್ಯಕ್ಕೆ ಔಟಾದ ಉದಾಹರಣೆಗಳಿವೆ. ಆದರೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಆಟಗಾರ ಏಕದಿನ ಸರಣಿಯಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿಲ್ಲ.

ಸಿಡ್ನಿ ಏಕದಿನ ಪಂದ್ಯದಲ್ಲಿ ಈ ಘಟನೆ ಸಂಭವಿಸಿದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿ ಈ ಅಪರೂಪದ ಹಾಗೂ ಅನಗತ್ಯ ದಾಖಲೆ ಸೃಷ್ಟಿಯಾಗುತ್ತದೆ. ಏಕದಿನ ಪಂದ್ಯದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್‌ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು, ಹಾಗೆಯೇ ಟಾಮ್ ಲೇಥಮ್, ಲ್ಯಾನ್ಸ್ ಕ್ಲೂಸ್ನರ್, ಸೂರ್ಯಕುಮಾರ್ ಯಾದವ್ ಮತ್ತು ಶೋಯೆಬ್ ಮಲಿಕ್ ಅವರಂತಹ ಆಟಗಾರರು ಸೇರಿದ್ದಾರೆ.

ಸಿಡ್ನಿ ಮೈದಾನದಲ್ಲಿ ಕೊಹ್ಲಿ ದಾಖಲೆ ಹೇಳುವುದೇನು?
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ವಿರಾಟ್ ಕೊಹ್ಲಿ ಅವರ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಈ ಮೈದಾನದಲ್ಲಿ ಇದುವರೆಗೆ 7 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ ಕೇವಲ 146 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 25 ಕ್ಕಿಂತ ಕಡಿಮೆ ಇರುವುದು ಆತಂಕಕಾರಿ ವಿಷಯ.

ಪ್ರಸ್ತುತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ, ಸಿಡ್ನಿಯ ಕೊನೆಯ ಏಕದಿನ ಪಂದ್ಯದಲ್ಲಾದರೂ ತಮ್ಮ ಶತಕದ ಇನ್ನಿಂಗ್ಸ್ ಆಡುತ್ತಾರಾ? ಅಥವಾ ಅನಗತ್ಯ ದಾಖಲೆಗೆ ಸಿಲುಕುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

error: Content is protected !!