ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಕ್ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ತನ್ನ ಹುಟ್ಟುಹಬ್ಬದ ದಿನವೇ (ಅಕ್ಟೋಬರ್ 24) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನೋವಿನ ನಡುವೆಯೂ ಆತನ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಮೃತ ಯುವಕ ಕೊಪ್ಪಳದ ಕನಕಗಿರಿ ಮೂಲದ ಆರ್ಯನ್ (22). ಸುಮಾರು 15 ದಿನಗಳ ಹಿಂದೆ ಹಾಸನದ ಬಳಿ ಆರ್ಯನ್ ಬೈಕ್ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಆರ್ಯನ್ ತನ್ನ ಹುಟ್ಟುಹಬ್ಬದ ದಿನವೇ ಕೊನೆಯುಸಿರೆಳೆದಿದ್ದಾರೆ. ಮಗನ ಹುಟ್ಟುಹಬ್ಬದ ಸಂಭ್ರಮ ದುಃಖಕ್ಕೆ ತಿರುಗಿದರೂ, ಪೋಷಕರು ಧೈರ್ಯ ಮೆರೆದಿದ್ದಾರೆ. ಮೃತಪಟ್ಟ ಮಗನ ಕೈ ಹಿಡಿದು ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿದ ಅವರು, ನಂತರ ಆತನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.
ಪೋಷಕರ ಈ ನಿರ್ಧಾರದಿಂದ ಆರ್ಯನ್‌ನ ಅಂಗಾಂಗಗಳು ಬೇರೆ ಅಗತ್ಯ ಇರುವ ರೋಗಿಗಳಿಗೆ ಹೊಸ ಜೀವನ ನೀಡಲಿವೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್ಯನ್ ಅವರ ಅಂತ್ಯಕ್ರಿಯೆ ಇಂದು ಕೊಪ್ಪಳದ ಕನಕಗಿರಿಯಲ್ಲಿ ನೆರವೇರಲಿದೆ. ಕುಟುಂಬದವರ ಈ ಮಹತ್ವದ ನಿರ್ಧಾರಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

