ಹೊಸದಿಗಂತ ವಿಜಯಪುರ:
ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಕ್ಷಮೆ ಕೇಳಿ ವಿವಾದವನ್ನು ಬಗೆಹರಿಸುವುದನ್ನು ಬಿಟ್ಟು ‘ಭಂಡತನ’ ಪ್ರದರ್ಶಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಈ ನಡೆ ಕೇವಲ “ಪೌರುಷ ಹೇಳಿಕೊಳ್ಳಲು” ಮಾಡಿದ್ದು ಎಂದು ಟೀಕಿಸಿದರು.
ಕನ್ಹೇರಿ ಸ್ವಾಮೀಜಿ ಬಳಸಿರುವ ಶಬ್ದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಆಡು ಭಾಷೆಯ ಹೆಸರಿನಲ್ಲಿ ಇಂತಹ ಖಂಡನೀಯ ಮಾತುಗಳನ್ನು ಬಳಸುವುದು ಸರಿಯಲ್ಲ. “ನನಗೂ ಆಡು ಭಾಷೆಯಲ್ಲಿ ಅನೇಕ ಶಬ್ದಗಳು ಬರುತ್ತವೆ. ನಾನು ಮಾತನಾಡಿದ್ದರೆ ಏನಾಗುತ್ತೆ ಯೋಚಿಸಬೇಕು. ನನ್ನ ಬಗ್ಗೆ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ನಾನು ಅವರಿಗೆ ಏಕವಚನದಲ್ಲಿ ಮಾತನಾಡಿದ್ರೆ?” ಎಂದು ಪ್ರಶ್ನಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು.
ಶ್ರೀಗಳ ವಿರುದ್ಧ ವಿಜಯಪುರ ಜಿಲ್ಲಾ ನಿರ್ಬಂಧದ ನಿರ್ಧಾರದ ಹಿಂದೆ ತಮ್ಮ ಪಾತ್ರವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. “ಇದು ಜಿಲ್ಲಾಡಳಿತದ ಕೆಲಸ. ಜಿಲ್ಲಾಧಿಕಾರಿಗಳು ಹಾಗೂ ಎಸ್‌ಪಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಬಂಧ ಹೇರದೆ ಏನಾದರೂ ಅನಾಹುತ ಆಗಿದ್ದರೆ ನೀವೇ ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಿರಿ,” ಎಂದು ಸಮರ್ಥಿಸಿಕೊಂಡರು.
“ನನಗೂ ಅವರು ಆಪ್ತರು, ಅವರು ಕ್ಷಮೆ ಕೇಳಲಿ. ಅವರು ಕ್ಷಮೆ ಕೇಳಿದ್ದರೇ ದೊಡ್ಡವರಾಗುತ್ತಿದ್ದರು” ಎಂದು ಸಚಿವರು ಸಲಹೆ ನೀಡಿದರು. ದಿ. ಸಿದ್ಧೇಶ್ವರ ಶ್ರೀಗಳ ಉದಾಹರಣೆ ನೀಡಿದ ಎಂ.ಬಿ. ಪಾಟೀಲ್, “ಸಿದ್ಧೇಶ್ವರ ಶ್ರೀಗಳು ಕೂಡ ಆಡು ಭಾಷೆಯಲ್ಲೇ ಪ್ರವಚನ ಮಾಡುತ್ತಿದ್ದರು. ಅವರು ಎಂದಾದರೂ ಈ ರೀತಿ ಮಾತನಾಡಿದ್ದಾರಾ? ಶ್ರೀಗಳ ಆಡು ಭಾಷೆಯನ್ನ ಇವರು ಕಲಿಯಬೇಕು. ಅವರು ಸಿದ್ಧೇಶ್ವರ ಶ್ರೀಗಳ ಶಿಷ್ಯ, ನಾನು ಶಿಷ್ಯ. ಸಿದ್ಧೇಶ್ವರ ಶ್ರೀಗಳು ಲಿಂಗಾಯತ ಧರ್ಮ ಒಂದು ಜಾಗತಿಕ ಧರ್ಮ ಅಂತಾ ಹೇಳಿದ್ದಾರೆ,” ಎಂದು ನುಡಿದರು.

 
                                    