ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ 13 ಸಾವಿರಕ್ಕೂ ಅಧಿಕ ವಿಶೇಷ ರೈಲು ಸೇವೆ ಕಲ್ಪಿಸಲಾಗಿದ್ದು, 1 ಕೋಟಿ 5 ಲಕ್ಷಕ್ಕೂ ಅಧಿಕ ಜನರು ರೈಲ್ವೆ ಮೂಲಕ ಪ್ರಯಾಣ ಕೈಗೊಂಡಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಹಬ್ಬಗಳ ಅಂತ್ಯದಲ್ಲಿ ಸುಮಾರು 2 ಕೋಟಿಗೂ ಅಧಿಕ ಜನ ರೈಲ್ವೆಯಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ದೀಪಾವಳಿ ಮತ್ತು ಛತ್ ಹಬ್ಬದ ಪ್ರಯುಕ್ತ ದೇಶಾದ್ಯಂತ ಜನರ ಸಂಚಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ರೈಲು ಸಂಚಾರಕ್ಕೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 10 ವರ್ಷಗಳ ಹಿಂದೆ ವಾರ್ಷಿಕ 170ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದವು. 2024 – 25ನೇ ಸಾಲಿನಲ್ಲಿ 31 ಅಪಘಾತಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.
ವಾರ್ಷಿಕ ಸುಮಾರು 4 ಸಾವಿರ ಕಿಲೋ ಮೀಟರ್ ರೈಲ್ವೆ ಹಳಿಗಳ ನಿರ್ಮಾಣ ಮಾಡಲಾಗುತ್ತಿದ್ದು, ಆಧುನಿಕ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಮೊಬೈಲ್ ಫೋನ್ ಬಿಡಿ ಭಾಗಗಳನ್ನು ಸಂಪೂರ್ಣ ದೇಶೀಯವಾಗಿ ಉತ್ಪಾದನೆ ಮಾಡಲಾಗುವುದು. ಸಿಸಿ ಟಿವಿ ಸೇರಿದಂತೆ ವಿವಿಧ ಸಲಕರಣೆಗಳ ಚಿಪ್ ಗಳ ಉತ್ಪಾದನೆ ಸಹ ದೇಶದಲ್ಲಿ ಆರಂಭವಾಗಿದೆ. ಸರ್ವರ್ ಸೇರಿದಂತೆ ಉನ್ನತ ಕಾರ್ಯಕ್ಷಮತೆಯ ಇಂಧನ ಸಾಮರ್ಥ್ಯದ ಮೈಕ್ರೋ ಪ್ರೊಸೆಸರ್ ಅಭಿವೃದ್ಧಿಗೆ ಸರ್ಕಾರ 200 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಮಾಡಲಿದೆ ಎಂದು ತಿಳಿಸಿದರು.
ಹಬ್ಬದ ಪ್ರಯುಕ್ತ ಹಳಿಗಿಳಿದಿವೆ 13 ಸಾವಿರಕ್ಕೂ ಅಧಿಕ ವಿಶೇಷ ರೈಲು: ಇದುವರೆಗೆ ಬರೋಬ್ಬರಿ 1.5 ಕೋಟಿಗೂ ಅಧಿಕ ಜನರಿಗೆ ಸೇವೆ

