ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸದ ಉತ್ಸಾಹದಲ್ಲಿ ಹೋಂ ಸ್ಟೇನಲ್ಲಿ ತಂಗಿದ್ದ ಯುವತಿಯೊಬ್ಬಳು ಸ್ನಾನಗೃಹದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರ ನಡುವೆ ಆತಂಕದ ವಾತಾವರಣ ಸೃಷ್ಟಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತಳನ್ನು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಾಲಾಪುರ ಗ್ರಾಮದ ನಿವಾಸಿ ರಂಜಿತಾ (27) ಎಂದು ಗುರುತಿಸಲಾಗಿದೆ. ರಂಜಿತಾ ದಾವಣಗೆರೆಯ ಗೆಳತಿ ರೇಖಾ ಅವರೊಂದಿಗೆ ಸ್ನೇಹಿತೆಯೊಬ್ಬಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಾಜರಾಗಲು ಬೆಂಗಳೂರಿನಿಂದ ಮೂಡಿಗೆರೆಗೆ ಬಂದಿದ್ದರು. ಇಬ್ಬರೂ ಶುಕ್ರವಾರ ಸಂಜೆ ಹೋಂ ಸ್ಟೇನಲ್ಲಿ ತಂಗಿದ್ದರು.
ಶನಿವಾರ ಬೆಳಗ್ಗೆ ರೇಖಾ ಸ್ನಾನ ಮುಗಿಸಿಕೊಂಡ ಬಳಿಕ ರಂಜಿತಾ ಬಾತ್‌ರೂಮ್‌ಗೆ ತೆರಳಿದರು. ಆದರೆ ಬಹಳ ಹೊತ್ತಾದರೂ ಹೊರಬಾರದಿದ್ದರಿಂದ ಹಾಗೂ ಒಳಗಿಂದ ನಿರಂತರ ನೀರು ಹರಿಯುವ ಶಬ್ದ ಕೇಳಿಬಂದದ್ದರಿಂದ ರೇಖಾ ಬಾಗಿಲು ತಟ್ಟಿದರು. ಪ್ರತಿಕ್ರಿಯೆ ಸಿಗದ ಕಾರಣ ಕಿಟಕಿಯಿಂದ ಒಳಗೆ ನೋಡಿದಾಗ ರಂಜಿತಾ ಕೆಳಗೆ ಬಿದ್ದಿರುವುದು ಕಂಡುಬಂದಿತು. ತಕ್ಷಣ ಹೋಂ ಸ್ಟೇ ಸಿಬ್ಬಂದಿ ಬಾಗಿಲು ಒಡೆದು ಅವರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಸಾವನ್ನಪ್ಪಿರುವುದಾಗಿ ದೃಢಪಡಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಸ್ನಾನಗೃಹದಲ್ಲಿದ್ದ ಗ್ಯಾಸ್ ಗೀಸರ್‌ನಿಂದ ಸೋರಿಕೆಯ ಶಂಕೆ ವ್ಯಕ್ತವಾದರೂ, ಸ್ಥಳದಲ್ಲಿ ಯಾವುದೇ ಗ್ಯಾಸ್ ವಾಸನೆ ಅಥವಾ ಸೋರಿಕೆಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಹೃದಯಾಘಾತ ಅಥವಾ ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಸಾವಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ನಿಖರವಾದ ಕಾರಣ ಮರಣೋತ್ತರ ವರದಿ ಬಂದ ನಂತರವೇ ತಿಳಿಯಲಿದೆ.

