Sunday, October 26, 2025

ಪ್ರೇಯಸಿಯ ಮದುವೆ ಲಗ್ನಪತ್ರಿಕೆ ನೋಡಿ ಜೀವನಕ್ಕೆ ಅಂತ್ಯ ಹಾಡಿದ ಯುವಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಸಿದ ಯುವತಿಯ ಮದುವೆ ಲಗ್ನಪತ್ರಿಕೆ ನೋಡಿದ ನಂತರ ಮನನೊಂದ ಯುವಕ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಪೆಗ್ಗರಿಕಾಡ್ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡ್ ಪೈಸಾರಿ ನಿವಾಸಿ ಹಾಗೂ ಜಿಪಂ ಮಾಜಿ ಸದಸ್ಯ ದಿವಂಗತ ಹೆಚ್.ಎಂ ಕಾಳಯ್ಯ ಅವರ ಪುತ್ರ ಹೆಚ್.ಕೆ. ಸುಮಂತ್ (28) ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡುಮಗನಾಗಿದ್ದ ಸುಮಂತ್ ಕುಟುಂಬದ ಏಕೈಕ ಪುರುಷ ಸಂತಾನನಾಗಿದ್ದ.

ಸುಮಂತ್‌ಗೆ ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯತ್ತ ಒನ್‌ಸೈಡ್ ಪ್ರೀತಿ ಬೆಳೆಸಿಕೊಂಡಿದ್ದ ಅವನು ಆಕೆಯನ್ನು ಮದುವೆಯಾಗುವ ಆಸೆಯಲ್ಲಿದ್ದ. ಆದರೆ ಆ ಯುವತಿ ಸುಮಂತ್‌ನ ಒತ್ತಡದಿಂದ ಬೇಸತ್ತು, ಆತ ತನ್ನನ್ನು ಫೋರ್ಸ್ ಮಾಡುತ್ತಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ನಂತರ ಪ್ರೇಮ ವೈಫಲ್ಯದಿಂದ ಬೇಸತ್ತ ಸುಮಂತ್‌ ಬೆಂಗಳೂರಿಗೆ ತೆರಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡತೊಡಗಿದ್ದ.

ಆದರೆ ಸುಮಾರು ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಗ್ರಾಮಕ್ಕೆ ವಾಪಸ್ಸಾದ ಸುಮಂತ್, ಖಾಸಗಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಅವನಿಗೆ ತನ್ನ ಪ್ರೇಯಸಿಯ ಮದುವೆ ದಿನಾಂಕ ನಿಗದಿಯಾದ ವಿಷಯ ತಿಳಿದು ಮನಸ್ಸು ಮಿಡಿದಿತ್ತು. ಅಕ್ಟೋಬರ್ 18ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮನೆಗೆ ಸಂಜೆ ಹಿಂದಿರುಗಿದ ತಾಯಿ ಈ ಘಟನೆ ಗಮನಿಸಿ ತಕ್ಷಣ ಮಕ್ಕಳಿಗೆ ತಿಳಿಸಿದ್ದು, ಸುಮಂತ್‌ರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಅವರನ್ನು ಮೊದಲಿಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಂತ್‌ ಸಾವನ್ನಪ್ಪಿದ್ದಾನೆ.

ಈ ಕುರಿತು ಮೃತನ ಅಕ್ಕ ಪೂರ್ಣಿಮಾ ನೀಡಿದ ದೂರಿನ ಆಧಾರದ ಮೇಲೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ 194ರಂತೆ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!