Sunday, October 26, 2025

ಭಾರತ–ಚೀನಾ ನೇರ ವಿಮಾನಯಾನ ಪುನರಾರಂಭ: ಕೋಲ್ಕತ್ತಾದಿಂದ ಗುವಾಂಗ್‌ಝೌಗೆ ಇಂಡಿಗೋ ಹಾರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀರ್ಘ ವಿರಾಮದ ನಂತರ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನಯಾನ ಮತ್ತೆ ಪ್ರಾರಂಭವಾಗಿದೆ. ಐದು ವರ್ಷಗಳ ಬಳಿಕ ಎರಡೂ ದೇಶಗಳ ನಡುವೆ ನೇರ ಹಾರಾಟವನ್ನು ಪುನರಾರಂಭಿಸುವ ಮಹತ್ವದ ಹೆಜ್ಜೆಯಾಗಿ, ಭಾರತದ ಅತಿದೊಡ್ಡ ವಾಣಿಜ್ಯ ವಿಮಾನಯಾನ ಕಂಪನಿ ಇಂಡಿಗೋ (IndiGo) ಇಂದು ಕೋಲ್ಕತ್ತಾದಿಂದ ಚೀನಾದ ಗುವಾಂಗ್‌ಝೌ (Guangzhou) ನಗರಕ್ಕೆ ದೈನಂದಿನ ವಿಮಾನ ಸೇವೆಯನ್ನು ಆರಂಭಿಸಿದೆ. ಈ ವಿಮಾನ ಭಾನುವಾರ ರಾತ್ರಿ 10 ಗಂಟೆಗೆ (ಭಾರತೀಯ ಸಮಯ) ಕೋಲ್ಕತ್ತಾದಿಂದ ಹೊರಟು ಚೀನಾಕ್ಕೆ ಪ್ರಯಾಣ ಬೆಳೆಸಲಿದೆ.

ಪ್ರಸ್ತುತ ಭಾರತದಿಂದ ಹಾಂಗ್ ಕಾಂಗ್‌ಗೆ ನಿಯಮಿತ ಹಾರಾಟಗಳು ನಡೆಯುತ್ತಿವೆ. ಆದರೆ ನವದೆಹಲಿಯಿಂದ ಶಾಂಘೈ ಹಾಗೂ ಗುವಾಂಗ್‌ಝೌಗೆ ಹೆಚ್ಚುವರಿ ನೇರ ಸೇವೆಗಳು ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿವೆ. ಈ ಕುರಿತು ಕೋಲ್ಕತ್ತಾ ವಾಣಿಜ್ಯ ಮಂಡಳಿಯ ಅಧ್ಯಕ್ಷ ರಾಜೀವ್ ಸಿಂಗ್ ಮಾಹಿತಿ ನೀಡಿದ್ದು “ನೇರ ವಿಮಾನ ಸಂಪರ್ಕವು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ಸಾಗಣೆ ಸಮಯವನ್ನು ಕಡಿಮೆ ಮಾಡಲಿದೆ. ಇದು ಎರಡೂ ರಾಷ್ಟ್ರಗಳ ವ್ಯಾಪಾರಿಗಳಿಗೆ ಪ್ರಯೋಜನಕಾರಿ ಹೆಜ್ಜೆ” ಎಂದು ಹೇಳಿದರು.

ಭಾರತ ಮತ್ತು ಚೀನಾ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ರಾಷ್ಟ್ರಗಳು ದೀರ್ಘಕಾಲದಿಂದ ಪ್ರಾದೇಶಿಕ ಪ್ರಭಾವಕ್ಕಾಗಿ ಸ್ಪರ್ಧಿಸುತ್ತಿವೆ. ಆದರೆ 2020ರಲ್ಲಿ ಹಿಮಾಲಯದ ಗಡಿಯಲ್ಲಾದ ಮಾರಕ ಘರ್ಷಣೆಯ ಬಳಿಕ ರಾಜತಾಂತ್ರಿಕ ಬಾಂಧವ್ಯಗಳು ಶೀತವಾಗಿದ್ದವು. ಇದೀಗ ವಿಮಾನಯಾನ ಪುನರಾರಂಭವು “ಜನರಿಂದ ಜನರಿಗೆ ಸಂಪರ್ಕ” ಹೆಚ್ಚಿಸಿ, “ದ್ವಿಪಕ್ಷೀಯ ವಿನಿಮಯ ಸಾಮಾನ್ಯೀಕರಣಕ್ಕೆ” ಸಹಾಯ ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತವು ಚೀನಾದಿಂದ ಹೆಚ್ಚಿನ ಪ್ರಮಾಣದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಕೈಗಾರಿಕಾ ಬೆಳವಣಿಗೆಯಲ್ಲಿ ಬೀಜಿಂಗ್‌ನ ಮೇಲೆ ಅವಲಂಬಿತವಾಗಿದೆ. ವಾಣಿಜ್ಯ ಸಚಿವಾಲಯದ ವರದಿಯ ಪ್ರಕಾರ, ಕಳೆದ ತಿಂಗಳು ಭಾರತಕ್ಕೆ ಚೀನಾದಿಂದ ಆಮದು 11 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಆಗಿದ್ದು, ಇದು ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ 16 ಶೇಕಡಾ ಹೆಚ್ಚಾಗಿದೆ. ಭಾರತದಿಂದ ಚೀನಾಕ್ಕೆ ರಫ್ತು 1.47 ಶತಕೋಟಿ ಡಾಲರ್, ಇದು ವರ್ಷದಿಂದ ವರ್ಷಕ್ಕೆ ಸುಮಾರು 34 ಶೇಕಡಾ ವೃದ್ಧಿಯಾಗಿದೆ.

error: Content is protected !!