ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಮಧ್ಯೆ ನಡೆಯುತ್ತಿದ್ದ ಸಂಘರ್ಷವನ್ನು ಅಮೆರಿಕ ಮತ್ತು ಮಲೇಷ್ಯಾ ಮಧ್ಯಸ್ಥಿಕೆಯಿಂದ ನಿಲ್ಲಿಸಿದ್ದು, ಇಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಸಮ್ಮುಖದಲ್ಲಿ ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.
ಮಲೇಷ್ಯಾದ ಅಧ್ಯಕ್ಷತೆಯಲ್ಲಿ ಕೌಲಾಲಂಪುರದಲ್ಲಿ ಭಾನುವಾರ ಆರಂಭವಾದ 47ನೇ ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲಿ ಥಾಯ್ ಪ್ರಧಾನಿ ಅನುಟಿನ್ ಚಾರ್ನ್‌ವಿರಾಕುಲ್ ಮತ್ತು ಅವರ ಕಾಂಬೋಡಿಯಾದ ಪ್ರಧಾನಿ ಹನ್ ಮಾನೆಟ್ ಅವರು ‘ಕೆಎಲ್ ಪೀಸ್ ಅಕಾರ್ಡ್’ ಎಂದು ಕರೆಯಲಾದ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಟ್ರಂಪ್, “ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಮಿಲಿಟರಿ ಸಂಘರ್ಷ ಕೊನೆಗೊಳಿಸಲು ಐತಿಹಾಸಿಕ ಒಪ್ಪಂದ ಮಾಡಿಸಲಾಗಿದೆ. ಉಭಯ ರಾಷ್ಟ್ರಗಳು ಇದಕ್ಕೆ ಒಪ್ಪಿದ್ದರಿಂದ ಆಗ್ನೇಯ ಏಷ್ಯಾದ ಜನರಿಗೆ ಇದು ಮಹತ್ವದ ದಿನವಾಗಿದೆ” ಎಂದು ಬಣ್ಣಿಸಿದರು.
ಈ ವರ್ಷದ ಆರಂಭದಲ್ಲಿ, ಈ ಎರಡು ದೇಶಗಳ ಗಡಿಯಲ್ಲಿ ಸಶಸ್ತ್ರ ಸಂಘರ್ಷ ಸಂಭವಿಸಿತ್ತು. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಶಾಂತಿ ನೆಲೆಸಬೇಕು ಎಂಬುದು ಅಮೆರಿಕದ ಬದ್ಧತೆಯಾಗಿತ್ತು. ನನ್ನ ಸರ್ಕಾರ ಸಂಘರ್ಷ ಉಲ್ಬಣಗೊಳ್ಳುವುದನ್ನು ತಡೆಯಲು ತಕ್ಷಣವೇ ಕಾರ್ಯಪ್ರವೃತ್ತವಾಯಿತು ಎಂದರು.
ಈ ಶಾಂತಿ ಒಪ್ಪಂದದ ಜೊತೆಗೆ, ನಾವು ಕಾಂಬೋಡಿಯಾದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇವೆ. ಥೈಲ್ಯಾಂಡ್‌ನೊಂದಿಗೆ ಬಹಳ ಮುಖ್ಯವಾದ ನಿರ್ಣಾಯಕ ಖನಿಜಗಳ ಒಪ್ಪಂದಕ್ಕೂ ಸಹಿ ಹಾಕುತ್ತಿದ್ದೇವೆ. ಈ ಸಂಘರ್ಷವನ್ನು ನಿಲ್ಲಿಸಿದ್ದಕ್ಕೆ ನಾನು ಹೆಮ್ಮೆಪಡುತ್ತೇನೆ. ಸ್ವತಂತ್ರ ರಾಷ್ಟ್ರ, ಸಮೃದ್ಧಿ, ಸುರಕ್ಷತೆ, ಭದ್ರತೆ ಮತ್ತು ಶಾಂತಿ ನಮ್ಮೆಲ್ಲರ ಅಗತ್ಯವಾಗಿದೆ ಎಂದು ಹೇಳಿದರು.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ 817 ಕಿಲೋ ಮೀಟರ್ ಗಡಿಯು ವಿವಾದಕ್ಕೆ ಕಾರಣವಾಗಿದೆ. ಎರಡೂ ರಾಷ್ಟ್ರಗಳು ಈ ಪ್ರದೇಶಕ್ಕಾಗಿ ದೀರ್ಘಕಾಲದಿಂದ ಕಿತ್ತಾಡುತ್ತಿವೆ. .

 
                                    