ಹೊಸ ದಿಗಂತ ವರದಿ, ಮಂಡ್ಯ :
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆಗೈದಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ 2ನೇ ಅಪರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಮಂಡ್ಯದ ಸಬ್ದರಿಯಾ ಮೊಹಲ್ಲಾ ನಿವಾಸಿ ಸೈಯದ್ ರಿಜ್‌ವಾನ ಬಾನು (36) ಹಾಗೂ ಈಕೆಯ ಪ್ರಿಯಕರ ದಾವಣಗೆರೆ ಜಿಲ್ಲೆಯ ಹರಿಹರದ ರೆಹಮತ್ ಉಲ್ಲಾ (28) ಎಂಬುವರೇ ಶಿಕ್ಷೆಗೊಳಗಾದ ಆಪಾದಿತರಾಗಿದ್ದಾರೆ.
ಸಬ್ದರಿಯಾಮೊಹಲ್ಲಾ ನಿವಾಸಿ, ತಗ್ಗಹಳ್ಳಿ ಸರ್ಕಾರಿ ಕಾಲೇಜಿನ ಉಪ ಪ್ರಾಂಶುಪಾಲ ಅಲ್ತಾಫ್ ಮೆಹದಿ ಎಂಬುವರೇ ಕೊಲೆಯಾದವರಾಗಿದ್ದಾರೆ.
ಉಪ ಪ್ರಾಂಶುಪಾಲ ಅಲ್ತಾಫ್ ಮೆಹದಿ ಮತ್ತು ಸೈಯದ್ ರಿಜ್‌ವಾನ ಬಾನು ಅವರುಗಳು 19 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹರಿಹರದ ರೆಹಮತ್ ಉಲ್ಲಾ ಫೇಸ್‌ಬುಕ್‌ನಲ್ಲಿ ರಿಜ್‌ವಾನ ಬಾನು ಅವರನ್ನು ಪರಿಚಯ ಮಾಡಿಕೊಂಡಿದ್ದ. ನಂತರ ದಿನಗಳಲ್ಲಿ ಮಂಡ್ಯಕ್ಕೆ ಬಂದಿದ್ದ. ಈತನನ್ನು ಪತ್ನಿಯೇ ಪತಿಗೆ ಪರಿಚಯ ಮಾಡಿಕೊಟ್ಟು ಇವರು ಟೈಲ್ಸ್ ವ್ಯಾಪಾರ ಮಾಡುತ್ತಿದ್ದು, ಇವರಿಗೆ ಅಂಗಡಿಯೊಂದನ್ನು ತೋರಿಸುವಂತೆ ಪತಿಗೆ ತಿಳಿಸಿದ್ದಾಳೆ. ನಂತರ ಕೆಲಸಕ್ಕಾಗಿ ತಾನೇ ಅವರ ಅಂಗಡಿಯಲ್ಲಿ ಕೆಲಸ ಮಾಡುವುದಾಗಿ ಪತಿಗೆ ತಿಳಿಸಿ ಅಂಗಡಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ.
ಇವರಿಬ್ಬರ ನಡುವೆ ಅನೈತಿಕ ಸಂಬಂಧ ಉಂಟಾಗಿದೆ. ಇದನ್ನು ಗಮನಿಸಿದ ಉಪ ಪ್ರಾಂಶುಪಾಲ ಅಲ್ತಾಫ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಇಬ್ಬರೂ ಬೇರೆಯಾಗಿ ಅಲ್ತಾಫ್ ಬೇರೊಂದು ಮದುವೆ ಮಾಡಿಕೊಂಡು ದೂರವಾಗಿದ್ದ. ಆದರು ಮಕ್ಕಳನ್ನು ನೋಡುವುದಕ್ಕಾಗಿ ಆಗಾಗ್ಗೆ ಬರುತ್ತಿದ್ದ. ಕಳೆದ 2021ರ ಜೂನ್ 29ರಂದು ಮಕ್ಕಳನ್ನು ನೋಡಲು ಸಬ್ದರಿಯಾಮೊಹಲ್ಲಾದ ಪತ್ನಿ ಮನೆಗೆ ಬಂದು ಅಲ್ಲೇ ರಾತ್ರಿ ಮಲಗಿದ್ದಾನೆ. ಈ ವೇಳೆ ರಿಜವಾನ ಬಾನು ತನ್ನ ಪ್ರಿಯಕರ ರೆಹಮತ್ ಉಲ್ಲಾನನ್ನು ಮಧ್ಯರಾತ್ರಿ ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಪತಿ ಅಲ್ತಾಫ್‌ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಸಾಕ್ಷ್ಯ ನಾಶ ಮಾಡಿದ್ದಾರೆ.

