Tuesday, October 28, 2025

ರೈತರ ಭೂಮಿ ಕಬಳಿಕೆ ಆರೋಪ: ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳ ದೌಡು

ಹೊಸ ದಿಗಂತ ವರದಿ,ದಾವಣಗೆರೆ:

ಜಿಲ್ಲೆಯ ಹರಿಹರ-ಹರಪನಹಳ್ಳಿ ತಾಲೂಕು ಗಡಿ ಭಾಗದಲ್ಲಿ ಅರಣ್ಯ, ಕಂದಾಯ ಭೂಮಿ, ರೈತರ ಭೂಮಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನೇತೃತ್ವದ ಮೂವರು ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು.

ಹರಿಹರ ತಾಲೂಕು ಚಿಕ್ಕಬಿದರಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡವು ಸ್ಥಳೀಯ ಶಾಸಕ ಬಿ.ಪಿ.ಹರೀಶ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ರೈತರ ಸಮಕ್ಷಮದಲ್ಲಿ ಪರಿಶೀಲನೆ ಕೈಗೊಂಡಿತು.

ಬೇನಾಮಿ ಹೆಸರಿನಲ್ಲಿ ಚಿಕ್ಕಬಿದರಿ ಗ್ರಾಮದ ಹಳ್ಳ ಒತ್ತುವರಿ ಜೊತೆಗೆ ಅರಣ್ಯ ಮತ್ತು ಕಂದಾಯ ಭೂಮಿ ಹಾಗೂ ರೈತರ ಜಮೀನನ್ನು ಶಾಮನೂರು ಕುಟುಂಬ ಕಬಳಿಕೆ ಮಾಡಿಕೊಂಡಿದೆ ಎಂಬುದಾಗಿ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ರಾಜ್ಯ ಸರ್ಕಾದದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿತು. ಭೂ ಮಾಪನ ಇಲಾಖೆ, ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ ಆಯುಕ್ತರನ್ನು ಒಳಗೊಂಡ ಜಂಟಿ ಸಮೀಕ್ಷಾ ತಂಡಕ್ಕೆ ಶಾಸಕ ಬಿ.ಪಿ.ಹರೀಶ, ಸ್ಥಳೀಯ ರೈತರು, ಗ್ರಾಮಸ್ಥರು ಮಾಹಿತಿ ಒದಗಿಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್‌, ಒತ್ತುವರಿ ದೂರು ಬಂದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಮತ್ತೆ ನವೆಂಬರ್‌ 10, 11 ಹಾಗೂ 12ರಂದು ಅತ್ಯಾಧುನಿಕ ತಂತ್ರಜ್ಞಾನದ ಬಳಸಿಕೊಂಡು ಅರಣ್ಯ ಇಲಾಖೆ ಜೊತೆಗೂಡಿ ಜಂಟಿ ಸಮೀಕ್ಷೆ ಮಾಡಲಿದ್ದೇವೆ ಎಂದರು.

ಚಿಕ್ಕಬಿದರಿ ಗ್ರಾಮಸ್ಥ ಆಕಾಶ್ ಮಾತನಾಡಿ, ಗ್ರಾಮದ ಬಳಿ 150 ಅಡಿ ಅಗಲ, 2 ಕಿ.ಮೀ ಉದ್ದದಷ್ಟು ಹಳ್ಳ ಒತ್ತುವರಿಯಾಗಿದೆ. ಮೇಲಾಧಿಕಾರಿಗಳು ಸರ್ವೇಗೆ ಬರುತ್ತಾರೆಂದು ಗೊತ್ತಾಗಿದ್ದರಿಂದ ಹಿಟಾಚಿಯಿಂದ ಮುಚ್ಚಿದ್ದ ಹಳ್ಳ ತೆಗೆಸಿದ್ದಾರೆ. ಸರ್ವೇ ಇಲಾಖೆಯವರು ನ.10ರಿಂದ ಮೂರು ದಿನಗಳ ಕಾಲ ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಸರ್ವೇ ಮಾಡುವುದಾಗಿ ಹೇಳಿದ್ದು, ಆನಂತರ ಒತ್ತುವರಿಯಾಗಿರುವುದು ಸ್ಪಷ್ಟವಾಗಲಿದೆ ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬೇನಾಮಿ ಹೆಸರಿನಲ್ಲಿ ಚಿಕ್ಕಬಿದರಿ ಹಳ್ಳವನ್ನು ಒತ್ತುವರಿ ಮಾಡಿಕೊಂಡು, ಎನ್‌.ಎ ಕನ್ವರ್ಟ್ ಸಹ ಮಾಡಿಸಿದ್ದಾರೆ. ಈ ಜಾಗದಲ್ಲೂ ಕಾರ್ಖಾನೆ ಕಟ್ಟಬೇಕೆಂದುಕೊಂಡಿದ್ದಾರೆ. ದಾಖಲೆಗಳ ಪ್ರಕಾರ ಒತ್ತುವರಿಯಾದ ಅರಣ್ಯ ಮತ್ತು ಕಂದಾಯ ಇಲಾಖೆ ಭೂಮಿಯನ್ನು ತೆರವುಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕ ಬಿ.ಪಿ.ಹರೀಶ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು, ಕಂದಾಯ, ಪೊಲೀಸ್‌, ಭೂ ದಾಖಲೆಗಳ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!