ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಒಂದು ಹೊಸ ಗೊಂದಲ ಹುಟ್ಟಿಕೊಂಡಿದೆ. ಹೌದು! ಅದು ಪಂದ್ಯಗಳ ಸಮಯದ ಬಗ್ಗೆ! ಆಸ್ಟ್ರೇಲಿಯಾದ ಸಮಯ ಭಾರತದ ಕಾಲಮಾನಕ್ಕಿಂತ ಸುಮಾರು ಎರಡೂವರೆಯಿಂದ ಐದೂವರೆ ಗಂಟೆಗಳವರೆಗೆ ಮುಂದೆ ಇರುವುದರಿಂದ, ಭಾರತ-ಆಸ್ಟ್ರೇಲಿಯಾ ಪಂದ್ಯಗಳು ಯಾವ ಸಮಯಕ್ಕೆ ಆರಂಭವಾಗುತ್ತವೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಒಡಿಐ ಸರಣಿಯಲ್ಲಿ ಭಾರತ 1-2 ಅಂತರದಿಂದ ಸೋತು ನಿರಾಶೆ ಅನುಭವಿಸಿದರೂ, ಟೀಮ್ ಇಂಡಿಯಾ ಇದೀಗ ಟಿ20 ಸರಣಿಯ ಮೂಲಕ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಅಕ್ಟೋಬರ್ 29ರಿಂದ ಆರಂಭವಾಗಲಿರುವ ಈ ಐದು ಪಂದ್ಯಗಳ ಟಿ20 ಸರಣಿಯು ಭಾರತೀಯರಿಗೆ ಪ್ರತಿಷ್ಠೆಯ ಕಣವಾಗಿದ್ದು, ಏಷ್ಯಾ ಕಪ್ ಗೆದ್ದ ಬಳಿಕ ಮತ್ತೊಂದು ಪ್ರಶಸ್ತಿಗೆ ತಂಡ ಕಣ್ಣು ಹಾಯಿಸಿದೆ.
ಒಡಿಐ ಪಂದ್ಯಗಳು ಬೆಳಗ್ಗೆ 9 ಗಂಟೆಗೆ ಆರಂಭವಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಟಿ20 ಪಂದ್ಯಗಳೂ ಬೇಗ ಆರಂಭವಾಗುತ್ತವೆ ಎಂದುಕೊಂಡಿದ್ದರು. ಆದರೆ ಅದೇನೂ ಅಗತ್ಯವಿಲ್ಲ! ಟಿ20 ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1:45 ಕ್ಕೆ ಆರಂಭವಾಗಲಿವೆ. ಅಂದರೆ, ಮಧ್ಯಾಹ್ನದ ಊಟ ಮುಗಿಸಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಅಥವಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಆರಾಮವಾಗಿ ಪಂದ್ಯವನ್ನು ವೀಕ್ಷಿಸಬಹುದು.
ವೇಳಾಪಟ್ಟಿಯ ಪ್ರಕಾರ, ಮೊದಲ ಎರಡು ಪಂದ್ಯಗಳು ಅಕ್ಟೋಬರ್ 29 ಮತ್ತು 31ರಂದು ನಡೆಯಲಿದ್ದು, ಉಳಿದ ಮೂರು ಪಂದ್ಯಗಳು ನವೆಂಬರ್ 2, 6 ಮತ್ತು 8ರಂದು ನಡೆಯಲಿವೆ. ಎಲ್ಲವೂ ಮಧ್ಯಾಹ್ನ 1:45 ಕ್ಕೆ ಆರಂಭವಾಗಲಿವೆ.
ಈ ಸರಣಿಗೆ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ತಂಡದ ಉಪನಾಯಕನಾಗಿ ಆಯ್ಕೆಯಾದ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಫಾರ್ಮ್ ಕುರಿತು ಚಿಂತೆ ಇದೆ. ಇತ್ತೀಚಿನ ಒಡಿಐ ಹಾಗೂ ಏಷ್ಯಾ ಕಪ್‌ನಲ್ಲಿ ಅವರ ಪ್ರದರ್ಶನ ನಿರಾಶೆ ತಂದಿತ್ತು.
ಟಿ20 ಸರಣಿಯಲ್ಲಿ ಗಿಲ್ ಅವರ ಬ್ಯಾಟಿಂಗ್‌ಗೆ ಹೊಸ ಆರಂಭ ಸಿಗುತ್ತದೆಯೇ? ಸೂರ್ಯಕುಮಾರ್‌ನ ನಾಯಕತ್ವದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಹೇಗೆ ಆಡುತ್ತದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

