ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮೋಂಥಾ ಚಂಡಮಾರುತ ಭೀತಿ ಹೆಚ್ಚಾಗಿದ್ದು, ಜನಜೀವನದ ಮೇಲೆ ಅದರ ಪ್ರಭಾವ ಈಗಾಗಲೇ ಕಾಣಿಸಿಕೊಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಈ ಚಂಡಮಾರುತ ಅಕ್ಟೋಬರ್ 28ರ ಸಂಜೆ ಅಥವಾ ರಾತ್ರಿ ವೇಳೆಗೆ ಕಾಕಿನಾಡ ಬಳಿಯಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಗಾಳಿಯ ವೇಗ ಪ್ರತಿ ಗಂಟೆಗೆ 90 ರಿಂದ 110 ಕಿಲೋಮೀಟರ್ ತನಕ ಹೆಚ್ಚಾಗಬಹುದೆಂದು ಮುನ್ಸೂಚನೆ ನೀಡಲಾಗಿದೆ.
ಕರಾವಳಿಯ ಕಾಕಿನಾಡ, ಚಿತ್ತೂರು, ತಿರುಪತಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿಗಳು ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ತುರ್ತು ಸಿದ್ಧತೆಗಳನ್ನು ಕೈಗೊಂಡಿವೆ. ಜನರಿಗೆ ಮನೆಯಿಂದ ಅನಾವಶ್ಯಕವಾಗಿ ಹೊರಬರಬಾರದು ಎಂಬ ಸೂಚನೆ ನೀಡಲಾಗಿದೆ.
ಈ ನಡುವೆ ತಿರುಪತಿ ತಿರುಮಲಕ್ಕೆ ಯಾತ್ರೆಗೆ ತೆರಳುವ ಭಕ್ತರಿಗೆ ಪ್ರಮುಖ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತವು ಪ್ರಸ್ತುತ ತೀವ್ರ ಮಳೆ ಮತ್ತು ಬಲವಾದ ಗಾಳಿಯಿಂದ ಭೂಕುಸಿತದ ಅಪಾಯ ಹೆಚ್ಚಿರುವುದರಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಭಕ್ತರಿಗೆ ಮನವಿ ಮಾಡಿದೆ.
ಚಿತ್ತೂರು ಜಿಲ್ಲೆಯ ನಗರಿ ಕ್ಷೇತ್ರದಲ್ಲಿ ಕಳೆದ ನಾಲ್ಕು ದಿನಗಳಿಂದ ಮಧ್ಯಮದಿಂದ ಭಾರೀ ಮಳೆಯಾಗುತ್ತಿದ್ದು, ಕುಶಸ್ಥಳಿ ನದಿಯ ಪ್ರವಾಹದಿಂದ ಹಲವು ರಸ್ತೆಗಳು ಮುಚ್ಚಲ್ಪಟ್ಟಿವೆ. ವಾಹನ ಸಂಚಾರವನ್ನು ಬೈಪಾಸ್ ಮಾರ್ಗಗಳಿಗೆ ತಿರುಗಿಸಲಾಗಿದೆ. ಅಪಾಯಕಾರಿ ಪ್ರವಾಹದ ಹಿನ್ನೆಲೆ ಜನರನ್ನು ನದಿತೀರಕ್ಕೆ ಹೋಗಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಚಂಡಮಾರುತದ ಪರಿಣಾಮವಾಗಿ ರೈಲುಗಳು ಮತ್ತು ವಿಮಾನಗಳ ಸಂಚಾರದಲ್ಲಿ ಅಡ್ಡಿ ಉಂಟಾಗಿದ್ದು, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ರಿಯಲ್‌ಟೈಮ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. NDRF ಮತ್ತು SDRF ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಸರ್ಕಾರವು ಪೀಡಿತರಿಗೆ ತುರ್ತು ನೆರವು ನೀಡುವಂತೆ ಸೂಚಿಸಿದೆ.

