ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಭಾರೀ ದುರಂತ ಸಂಭವಿಸಿದೆ. ಟರ್ಮಿನಲ್ 3 ಬಳಿ ನಿಲುಗಡೆಗೊಂಡಿದ್ದ ಏರ್ ಇಂಡಿಯಾ SATS ವಿಮಾನ ನಿಲ್ದಾಣ ಸೇವೆಗಳ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಉರಿದು ಭಸ್ಮವಾಗಿದೆ.
ಅದೃಷ್ಟವಶಾತ್ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಕೇವಲ ಚಾಲಕರು ಮಾತ್ರ ಹಾಜರಿದ್ದರೆಂದು ವರದಿಯಾಗಿದೆ. ಬೆಂಕಿ ಕಾಣುತ್ತಿದ್ದಂತೆ ಪ್ರಯಾಣಿಕರು ಮತ್ತು ಸಿಬ್ಬಂದಿ ಆತಂಕಗೊಂಡು ಸ್ಥಳದಿಂದ ದೂರ ಸರಿದರು. ಬಸ್‌ನಲ್ಲಿ ಉಂಟಾದ ಅಗ್ನಿ ಅವಘಡದಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಹೊಗೆ ಆವರಿಸಿತ್ತು.
ಬೆಂಕಿ ಕಾಣುತ್ತಿದ್ದಂತೆಯೇ ವಿಮಾನ ನಿಲ್ದಾಣದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಅಗ್ನಿಯನ್ನು ನಿಯಂತ್ರಿಸಲು ಯಶಸ್ವಿಯಾಯಿತು. ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

