ಹೊಸ ದಿಗಂತ ವರದಿ, ಕಲಬುರಗಿ:
ಹೈಕೋರ್ಟ್ ನಿರ್ದೇಶನದಂತೆ ಕಲಬುರಗಿ ಜಿಲ್ಲಾಡಳಿತ ಆರೆಸ್ಸೆಸ್ ಸೇರಿ ೧೦ ಸಂಘಟನೆಗಳ ಆಯ್ದ ಪ್ರಮುಖರನ್ನೊಳಗೊಂಡ ಶಾಂತಿ ಸಭೆಯೂ ಯಾವುದೇ ಒಮ್ಮತಕ್ಕೆ ಬರದೇ,ಗದ್ದಲಗಳ ಗೂಡಾಗಿ ಅಶಾಂತಿಯಲ್ಲಿ ಅಂತ್ಯಗೊಂಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭಾಂಗಣದಲ್ಲಿ ಬೆಳಿಗ್ಗೆ ೧೧-೩೦ಕ್ಕೆ ಆರಂಭವಾದ ಶಾಂತಿ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ,ಭೀಮ ಆರ್ಮಿ, ದಲಿತ ಪ್ಯಾಂಥರ್ ಸಂಘಟನೆ ಸೇರಿದಂತೆ ಹತ್ತು ಸಂಘಟನೆಗಳಿಂದ ಮೂವರು ಪ್ರತಿನಿಧಿಗಳಂತೆ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಎಲ್ಲಾ ಸಂಘಟನೆಗಳ ಓರ್ವ ಪ್ರಮುಖನಿಗೆ ತಮ್ಮ ವಿಷಯ ಪ್ರಸ್ತಾಪ ಮಾಡುವಂತೆ ನಿರ್ದೇಶನ ನೀಡಿದ ಬೆನ್ನಲ್ಲೆ ಎಲ್ಲರೂ ಅವರವರ ವಿಚಾರ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದು, ಆರೆಸ್ಸೆಸ್ ಮೊದಲೇ ಅರ್ಜಿಯಲ್ಲಿ ತಿಳಿಸಿರುವ ಎಲ್ಲಾ ವಿಷಯಗಳು ತಿಳಿಸಿತು.ತದನಂತರ ಕೆಲವು ಸಂಘಟನೆಗಳು ಪಥಸಂಚಲನದಲ್ಲಿ ಲಾಠಿ ಬಿಟ್ಟು,ರಾಷ್ಟ್ರಧ್ವಜ ಹಾಗೂ ಸಂವಿಧಾನದ ಪೀಠಿಕೆ ಹಿಡಿದು ಪದಸಂಚಲನ ನಡೆಸಲಿ ಎಂದು ತಿಳಿಸಿದರು.

ಈ ಮಧ್ಯೆ ಆರೆಸ್ಸೆಸ್ ಪರವಾಗಿ ಸಭೆಗೆ ಆಗಮಿಸಿದ್ದ ಬಿಜೆಪಿ ಮುಖಂಡ ಅಂಬಾರಾಯ್ ಅಷ್ಟಗಿ, ಸಂವಿಧಾನದ ಅಡಿಯಲ್ಲಿ ನಾವು ಪಥಸಂಚಲನ ಮಾಡುತ್ತೇವೆ.ಲಾಠಿ ಬಿಟ್ಟು ಪಥಸಂಚಲನ ಅಸಾಧ್ಯ ಎಂದು ತಿಳಿಸಿದ ಬೆನ್ನಲ್ಲೇ, ಇತರೆ ಸಂಘಟಕರು ಇದಕ್ಕೆ ತಕರಾರು ತೆಗೆದಿದ್ದರಿಂದ ಸಭೆಯಲ್ಲಿ ಗದ್ದಲ ಉಂಟಾಗಿ,ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಸ್ಥಳದಿಂದ ನಿರ್ಗಮಿಸಿದ ಹಿನ್ನೆಲೆ, ಎಲ್ಲರೂ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದರು.

