ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರಿಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ‘ಡಬಲ್ ಶಾಕ್’ ಎದುರಾಗಿದೆ. ಜೈಲಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅನಾರೋಗ್ಯದ ಕಾರಣ ನೀಡಿ ದರ್ಶನ್ ಸಲ್ಲಿಸಿದ್ದ ಹಾಸಿಗೆ, ದಿಂಬು ಕೋರಿಕೆಯ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಆದರೆ, ತಿಂಗಳಿಗೆ ಒಮ್ಮೆ ಬಟ್ಟೆ ಮತ್ತು ಹೊದಿಕೆಗಳನ್ನು ಒದಗಿಸಲು ಜೈಲಾಧಿಕಾರಿಗಳಿಗೆ ಆದೇಶಿಸಿದೆ.
ಹಾಸಿಗೆ, ದಿಂಬು ಅರ್ಜಿಗೆ ನಿರಾಕರಣೆ:
ಬೆನ್ನು ನೋವು, ಫಂಗಸ್ ಸಮಸ್ಯೆ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಅನಾರೋಗ್ಯ ಉಂಟಾಗುತ್ತಿದೆ. ತಲೆ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್ ಕೋರಿದ್ದರು. ಇದಕ್ಕೆ ಕೋರ್ಟ್ ನಿರಾಕರಿಸಿದ್ದು, ಕೇವಲ ತಿಂಗಳಿಗೊಮ್ಮೆ ಬಟ್ಟೆ, ಹೊದಿಕೆ ನೀಡಲು ಸೂಚಿಸಿದೆ.
ಕ್ವಾರಂಟೈನ್ ಸೆಲ್‌ನಿಂದ ವರ್ಗಾವಣೆ: ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿರುವ ಬಗ್ಗೆ ದರ್ಶನ್ ಆಕ್ಷೇಪ ವ್ಯಕ್ತಪಡಿಸಿ, ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ್ದರು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನ್ಯಾಯಾಲಯವು ಜೈಲಾಧಿಕಾರಿಗಳಿಗೆ ಅವಕಾಶ ನೀಡಿದೆ.
ಪ್ರಮುಖ ಬೆಳವಣಿಗೆಯಲ್ಲಿ, ಪ್ರಕರಣದ ಶೀಘ್ರ ವಿಚಾರಣೆ ನಡೆಸಲು ಎಸ್‌ಪಿಪಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಅಲ್ಲದೆ, ಅಕ್ಟೋಬರ್ 31 ರಂದು ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿಪಡಿಸಲು ಸೂಚನೆ ನೀಡಿದೆ. ಇದು ದರ್ಶನ್ ಅವರಿಗೆ ಎದುರಾದ ಮತ್ತೊಂದು ಪ್ರಮುಖ ಹಿನ್ನಡೆ ಎನ್ನಲಾಗಿದೆ.
ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಒಟ್ಟು ಆರು ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರೆ, ಉಳಿದ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.

