ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ‘ಮೊಂಥಾ’ ಚಂಡಮಾರುತದ ಮತ್ತು ಲಕ್ಷದ್ವೀಪದ ಮೇಲೆ ಉಂಟಾದ ವಾಯುಭಾರ ಕುಸಿತದ ನೇರ ಪರಿಣಾಮವು ಕರ್ನಾಟಕದ ಕರಾವಳಿಯ ಮೇಲೆ ಗೋಚರವಾಗಿದೆ. ಕಡಲು ಅಕ್ಷರಶಃ ಅಬ್ಬರಿಸುತ್ತಿದ್ದು, ಜಿಲ್ಲೆಯಾದ್ಯಂತ ಕಡಲ ಭೋರ್ಗರೆತ ಹೆಚ್ಚಾಗಿದೆ.
ತೀವ್ರ ಕಡಲ್ಕೊರೆತ:
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಮಟ್ಟು ಬೀಚ್ ಸುತ್ತಮುತ್ತ ಕಡಲ್ಕೊರೆತ ತೀವ್ರಗೊಂಡಿದ್ದು, ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಬಿರುಗಾಳಿಯ ಅಬ್ಬರವು ಇದೇ ರೀತಿ ಮುಂದುವರಿದರೆ ಕರಾವಳಿಯ ರಸ್ತೆಗಳು ಮತ್ತು ಜನವಸತಿ ಪ್ರದೇಶಗಳಿಗೂ ಹಾನಿಯಾಗುವ ಆತಂಕ ಸೃಷ್ಟಿಯಾಗಿದೆ.
ಮೀನುಗಾರಿಕೆಗೆ ನಿರ್ಬಂಧ:
ಕಡಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಮೂಲಕ ಮೀನುಗಾರರು ಸಮುದ್ರಕ್ಕಿಳಿಯದಂತೆ ನಿರ್ಬಂಧ ವಿಧಿಸಲಾಗಿದೆ.
ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿಯು ಜೋರಾಗಿದೆ. ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ಗಾಳಿ ಮತ್ತು ಮಳೆಯ ಕುರಿತು ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತವು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.

