Tuesday, November 4, 2025

ಸಿಲಿಕಾನ್ ಸಿಟಿಯ ಉಸಿರಿಗೆ ಕೊಡಲಿ ಏಟು: ಮೆಟ್ರೋ ಅಭಿವೃದ್ಧಿಗೆ ಸಾವಿರಾರು ಮರಗಳ ಬಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ತನ್ನ ಹಸಿರು ಹೊದಿಕೆಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ, ಬೆಂಗಳೂರು ಮೆಟ್ರೋ ರೈಲು ನಿಗಮ ತನ್ನ ಮಹತ್ವಾಕಾಂಕ್ಷೆಯ ಮೂರನೇ ಹಂತದ ಮೆಟ್ರೋ ಯೋಜನೆಗಾಗಿ ಸಾವಿರಾರು ಮರಗಳ ಮಾರಣಹೋಮಕ್ಕೆ ಮುಂದಾಗಿದೆ. ಇದಕ್ಕೆ ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಗರದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಈಗಾಗಲೇ ಹಲವು ಯೋಜನೆಗಳಿಗಾಗಿ ಮರಗಳನ್ನು ಕಡಿದ ಪರಿಣಾಮ, ಬೆಂಗಳೂರಿನ ಜನತೆ ಬೇಸಿಗೆಯಲ್ಲಿ ತೀವ್ರ ಬಿಸಿಲಿನ ಝಳಕ್ಕೆ ತತ್ತರಿಸಿದ್ದರು. ಇಂತಹ ಸಂದರ್ಭದಲ್ಲಿ, ಮೆಟ್ರೋದ ಮೂರನೇ ಹಂತದ ಯೋಜನೆಗೆ ಬರೋಬ್ಬರಿ 1092 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು BMRCL ತೀರ್ಮಾನ ಕೈಗೊಂಡಿದೆ.

ಮೆಟ್ರೋ 3ನೇ ಹಂತದ ಯೋಜನೆ ವಿವರ:

ಒಟ್ಟು ಮಾರ್ಗ: 44.65 ಕಿ.ಮೀ.

ಒಟ್ಟು ವೆಚ್ಚ: 15,611 ಕೋಟಿ ರೂ.

ಕಾರಿಡಾರ್ 1: ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (32.15 ಕಿ.ಮೀ. – 21 ನಿಲ್ದಾಣಗಳು)

ಕಾರಿಡಾರ್ 2: ಹೊಸಹಳ್ಳಿಯಿಂದ ಕಡಬಗೆರೆಯವರೆಗೆ (12.50 ಕಿ.ಮೀ. – 9 ನಿಲ್ದಾಣಗಳು)

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ಇನಾಯತ್, “ನಮ್ಮ ಮನೆ ಮುಂದೆ ಮೆಟ್ರೋ ಬರುತ್ತಿರುವುದು ಸಂತೋಷವೇ. ಆದರೆ, ಇದಕ್ಕಾಗಿ ಎಲ್ಲಾ ಮರಗಳನ್ನು ಕಡಿದರೆ ನಾವು ಬದುಕುವುದು ಹೇಗೆ? ಒಂದು ಮರ ಕಡಿದರೆ ಹತ್ತು ಸಸಿಗಳನ್ನು ನೆಡಬೇಕು ಎಂಬ ನಿಯಮವಿದೆ. BMRCL ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,” ಎಂದು ಒತ್ತಾಯಿಸಿದ್ದಾರೆ.

ಮರಗಳ ಮಾರಣಹೋಮದ ವಿಚಾರ ಇದೇ ಮೊದಲೇನಲ್ಲ. ಈ ಹಿಂದೆ, ಕಿತ್ತಳೆ ಮಾರ್ಗದ ಕಾಮಗಾರಿಗಾಗಿ BMRCL ಬರೋಬ್ಬರಿ 11,000 ಮರಗಳನ್ನು ಕಡಿಯಲು ಸಿದ್ಧತೆ ನಡೆಸಿತ್ತು. ಪರಿಸರ ಹೋರಾಟಗಾರರ ತೀವ್ರ ವಿರೋಧದಿಂದಾಗಿ ಈ ಸಂಖ್ಯೆಯನ್ನು 6,500ಕ್ಕೆ ಇಳಿಸಲಾಗಿತ್ತು. ಆದರೆ, ಪರಿಸರ ಹೋರಾಟಗಾರರು ಅದಕ್ಕೂ ಒಪ್ಪದ ಕಾರಣ, ಅಂತಿಮವಾಗಿ 2,183 ಮರಗಳನ್ನು ಕಡಿಯಲು ಮಾತ್ರ ಜಿಬಿಎ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಇದೀಗ ಮೂರನೇ ಹಂತದ ಕಾಮಗಾರಿಗೆ, ಮೊದಲ ಹಂತದಲ್ಲಿ 1092 ಮರಗಳನ್ನು ಕಡಿಯಲು ಮತ್ತು ತೆರವು ಮಾಡಲು ಜಿಬಿಎ ಅರಣ್ಯ ವಿಭಾಗ ಅನುಮತಿ ನೀಡಿದೆ. ಈ ಅನುಮತಿಯಿಂದಾಗಿ, ಬೃಹತ್ ಯೋಜನೆಯಲ್ಲಿ ಸುಮಾರು 10,045 ಮರಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು BMRCL ಮೂಲಗಳು ತಿಳಿಸಿವೆ. ಆದರೂ, ಬರೋಬ್ಬರಿ ಸಾವಿರಕ್ಕೂ ಹೆಚ್ಚು ಮರಗಳನ್ನು ಕಳೆದುಕೊಳ್ಳುತ್ತಿರುವುದು ನಗರದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವುದು ಖಚಿತ.

error: Content is protected !!