Wednesday, November 26, 2025

ಕಾಂಗ್ರೆಸ್ ಸರ್ಕಾರ ಪತನ ಗ್ಯಾರಂಟಿ: ನ.14ರ ಬಳಿಕ ಡಿಕೆಶಿಯೇ ಸಿಎಂ! ಬಿಜೆಪಿ ಶಾಸಕನ ಸ್ಫೋಟಕ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿರುವ ಬಗ್ಗೆ ಸ್ವಪಕ್ಷೀಯರೇ ಅಲ್ಲದೆ ವಿರೋಧ ಪಕ್ಷದ ನಾಯಕರೂ ಧ್ವನಿ ಎತ್ತುತ್ತಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನವೆಂಬರ್ 14ಕ್ಕೆ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಅದರ ಫಲಿತಾಂಶ ಪ್ರಕಟವಾದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್ ಗೌಡ ಅವರು, ಡಿ.ಕೆ. ಶಿವಕುಮಾರ್ ಅವರ ಪರವಾಗಿ ಬ್ಯಾಟ್ ಬೀಸಿದ್ದು ವಿಶೇಷ.

“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರು ರಾಜ್ಯಾದ್ಯಂತ ಸುತ್ತಾಡಿ, ಪಕ್ಷಕ್ಕೆ ಹಣಕಾಸು ಒದಗಿಸಿ 138 ಸ್ಥಾನಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ವಾಡಿಕೆಯಂತೆ ಅವರೇ ಮುಖ್ಯಮಂತ್ರಿ ಆಗಬೇಕಿತ್ತು. ಡಿ.ಕೆ. ಶಿವಕುಮಾರ್ ಅವರ ತಾಖತ್ತು, ಪರಿಶ್ರಮ ಮತ್ತು ಫಂಡ್ ಮೊಬಿಲೈಜ್ ಮಾಡಿದ ಕಾರಣಕ್ಕೆ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಏನಾದರೂ ಫಂಡಿಂಗ್ ಮಾಡಿದ್ರಾ? ಹಣ ಕೊಟ್ಟವರು ಡಿ.ಕೆ. ಶಿವಕುಮಾರ್ ಅಲ್ಲವೇ? ಡಿ.ಕೆ. ಶಿವಕುಮಾರ್ ಅವರ ಪರಿಶ್ರಮಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ” ಎಂದು ಹೇಳಿದ್ದಾರೆ.

“ಡಿ.ಕೆ. ಶಿವಕುಮಾರ್ ಮಾತ್ರ ತಾನು ನೂರಕ್ಕೆ ನೂರು ಸಿಎಂ ಆಗುತ್ತೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಏನೇ ಇದ್ದರೂ, ನವೆಂಬರ್ 14ರ ಬಳಿಕ ಈ ಕಾಂಗ್ರೆಸ್ ಸರ್ಕಾರ ಪತನ ಆಗುವುದು ಗ್ಯಾರಂಟಿ” ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.

error: Content is protected !!