Monday, November 3, 2025

ಮುಂಬೈ ಸ್ಟುಡಿಯೋದಲ್ಲಿ 17 ಮಕ್ಕಳನ್ನು ಒತ್ತೆಯಿಟ್ಟಿದ್ದ ಅಪಹರಣಕಾರ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಶೈಲಿಯ ನಾಟಕೀಯ ಘಟನೆಯೊಂದರಲ್ಲಿ, ಮುಂಬೈನ ಪವಾಯಿಯಲ್ಲಿರುವ ಆರ್.ಎ. ಸ್ಟುಡಿಯೋನಲ್ಲಿ ನಟನೆ ತರಬೇತಿಗೆ ಬಂದಿದ್ದ 17 ಮಕ್ಕಳನ್ನು ಸ್ಟುಡಿಯೋದ ಸಿಬ್ಬಂದಿಯೇ ಆಗಿದ್ದ ವ್ಯಕ್ತಿಯೊಬ್ಬ ಹಾಡಹಗಲೇ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಆತಂಕಕಾರಿ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ರೋಹಿತ್ ಆರ್ಯ ಎಂದು ಗುರುತಿಸಲಾದ ಆರೋಪಿ, ಮಕ್ಕಳನ್ನು ಸ್ಟುಡಿಯೋದ ಕೋಣೆಯೊಂದರಲ್ಲಿ ಕೂಡಿ ಹಾಕಿ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದ. ಆದರೆ, ಮುಂಬೈ ಪೊಲೀಸರ ತ್ವರಿತ ಮತ್ತು ಸಮಯೋಚಿತ ಕಾರ್ಯದಿಂದಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿ ಬಿಡುಗಡೆಯಾಗಿದ್ದು, ಅಪಹರಣಕಾರನನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.

ನಟನೆ ತರಗತಿಗೆ ಬಂದಿದ್ದ ಈ ಮುಗ್ಧ ಮಕ್ಕಳು, ಸ್ಟುಡಿಯೋದ ಕಿಟಕಿ ಗಾಜುಗಳಿಂದ ಹೊರಗೆ ಕೈಬೀಸುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮುಂಬೈ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿ, ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದ ರೋಹಿತ್ ಆರ್ಯನೊಂದಿಗೆ ಮಾತುಕತೆ ನಡೆಸಿ ಎಲ್ಲ ಮಕ್ಕಳನ್ನು ಬಿಡಿಸಿದ್ದಾರೆ ಮತ್ತು ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ ನಂತರ ರೋಹಿತ್ ಆರ್ಯನು ಒಂದು ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದ. ಆತಂಕವಿಲ್ಲದೆ, ಗೊಂದಲವಿಲ್ಲದೆ ಮಾತನಾಡಿದ್ದ ರೋಹಿತ್, “ನನಗೆ ಯಾವುದೇ ಹಣ ಬೇಡ, ನನ್ನ ಬೇಡಿಕೆಗಳು ಸ್ವಾರ್ಥದ್ದಲ್ಲ. ನನಗೆ ಕೆಲವು ವ್ಯಕ್ತಿಗಳೊಂದಿಗೆ ಮಾತನಾಡಬೇಕು, ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು. ಇದಕ್ಕೆ ಅವಕಾಶ ನೀಡದೇ ಹೋದರೆ ಈ ಮಕ್ಕಳಿಗೆ ಹಾನಿಯಾಗಲಿದೆ, ನಾನೂ ಸಹ ಸಾಯಲಿದ್ದೇನೆ. ಎಲ್ಲ ಯೋಚನೆ ಮಾಡಿಯೇ ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದೇನೆ. ಹಾಗಾಗಿ ನಾನು ಹೇಳಿದಂತೆ ಮಾಡಿ” ಎಂದು ಹೇಳಿಕೊಂಡಿದ್ದ.

ಆರೋಪಿ ರೋಹಿತ್ ಆರ್ಯ ಆರ್.ಎ. ಸ್ಟುಡಿಯೋದ ಸಿಬ್ಬಂದಿ ಆಗಿದ್ದು, ಮಕ್ಕಳಿಗೆ ನಟನೆಯ ತರಬೇತಿ ನೀಡುತ್ತಿದ್ದ ಮತ್ತು ಸ್ವಂತ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ರೋಹಿತ್ ಆರ್ಯನನ್ನು ಬಂಧಿಸಿದ್ದು, ಈ ಕೃತ್ಯದ ಹಿಂದಿನ ನಿಖರ ಉದ್ದೇಶ ಮತ್ತು ಆತನ ಮಾನಸಿಕ ಸ್ಥಿತಿಯ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!