ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯದಲ್ಲಿ ಬಹು ಚರ್ಚೆಗೆ ಗ್ರಾಸವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ನಾಳೆ (ಅಕ್ಟೋಬರ್ 31) ತೆರೆ ಬೀಳಲಿದೆ.
ಆದರೆ, ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವ ರಾಜ್ಯದ ಜನರಿಗೆ ಹಿಂದುಳಿದ ವರ್ಗಗಳ ಆಯೋಗವು ಒಂದು ಮಹತ್ವದ ಅವಕಾಶ ನೀಡಿದೆ. ಈ ನಾಗರಿಕರು ನವೆಂಬರ್ 10ರ ವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಯ ಮೂಲಕ ತಮ್ಮ ಮಾಹಿತಿಯನ್ನು ಸಲ್ಲಿಸಬಹುದು.
ಹಿಂದುಳಿದ ವರ್ಗಗಳ ಆಯೋಗವು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವಂತೆ, ನಾಗರಿಕರು https://kscbcselfdeclaration.karnataka.gov.in ಈ ಲಿಂಕ್ ಬಳಸಿಕೊಂಡು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸೆಪ್ಟೆಂಬರ್ 22ರಂದು ಆರಂಭವಾಗಿದ್ದ ಈ ಜಾತಿಗಣತಿ ಕಾರ್ಯ ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಸಮೀಕ್ಷಾ ಕಾರ್ಯವು ನಿರೀಕ್ಷಿತ ವೇಗ ಪಡೆಯದ ಹಿನ್ನೆಲೆಯಲ್ಲಿ ಗಡುವನ್ನು ಮೊದಲು ಅಕ್ಟೋಬರ್ 18ರವರೆಗೆ ಮತ್ತು ನಂತರ ಅಂತಿಮವಾಗಿ ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿತ್ತು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕುಂಟುತ್ತಾ ಸಾಗಿದ್ದು, ನಿಗದಿತ ಗುರಿ ತಲುಪದೆ ಕೇವಲ 7-8 ಮನೆಗಳ ಸಮೀಕ್ಷೆ ಆಗುತ್ತಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಯುಕ್ತರ ಗಮನ ಸೆಳೆದಿದ್ದರು. ಈ ವಿಳಂಬದ ಕಾರಣದಿಂದಾಗಿ ಆಯೋಗವು ಆನ್‌ಲೈನ್ ಮೂಲಕ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.
ಕೋರ್ಟ್ ಮಧ್ಯಂತರ ಆದೇಶದೊಂದಿಗೆ ಗಣತಿ
ಜಾತಿ ಗಣತಿ ವಿಚಾರವು ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿ ನ್ಯಾಯಾಲಯದ ಮೆಟ್ಟಿಲನ್ನು ಕೂಡಾ ಹತ್ತಿತ್ತು. ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್, ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿ ಗಣತಿ ಮುಂದುವರಿಸಲು ಅನುಮತಿ ನೀಡಿತ್ತು.
ಈ ಆದೇಶದ ಹಿನ್ನೆಲೆಯಲ್ಲಿ, ಆಯೋಗವು ದತ್ತಾಂಶದ ಗೌಪ್ಯತೆ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಕೋರ್ಟ್ ಸೂಚಿಸಿದ್ದು, ವಿಚಾರಣೆಯನ್ನು ಡಿಸೆಂಬರ್ 2ನೇ ವಾರಕ್ಕೆ ಮುಂದೂಡಲಾಗಿದೆ. ಈ ಕಾನೂನು ಅಡೆತಡೆಗಳ ನಡುವೆಯೂ, ಜಾತಿ ಗಣತಿ ಪ್ರಕ್ರಿಯೆಯು ಇದೀಗ ಬಹುತೇಕ ಕೊನೆಯ ಹಂತ ತಲುಪಿದೆ.

