ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿ ಇದೀಗ ರೋಚಕ ಹಂತ ತಲುಪಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ, ಇಂದಿನ ಎರಡನೇ ಟಿ20 ಪಂದ್ಯ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಏಕದಿನ ಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾ, ಇದೀಗ ಟಿ20 ಸರಣಿಯಲ್ಲಿ ಜಯ ಸಾಧಿಸುವ ಗುರಿ ಹೊಂದಿದೆ. ಎರಡೂ ತಂಡಗಳು ಮೊದಲ ಗೆಲುವಿನ ನೋಟದಲ್ಲಿ ಕಣಕ್ಕಿಳಿಯುತ್ತಿದ್ದು, ಮೆಲ್ಬರ್ನ್ನ ಚಳಿ ವಾತಾವರಣದ ಮಧ್ಯೆ ಕ್ರಿಕೆಟ್ ಪ್ರೇಮಿಗಳಿಗೆ ಉಸಿರು ಬಿಗಿಹಿಡಿಯುವ ಕಾದಾಟ ಎದುರಾಗಲಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನವನ್ನು ವಿಶ್ವ ಕ್ರಿಕೆಟ್‌ನ ಅತ್ಯಂತ ಐತಿಹಾಸಿಕ ಮೈದಾನಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ವಿಶಾಲ ಬೌಂಡರಿಗಳ ಕಾರಣದಿಂದಾಗಿ ಆಟಗಾರರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಸುಲಭವಲ್ಲ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 1:45 ಕ್ಕೆ ಆರಂಭವಾಗಲಿದ್ದು, ಟಾಸ್ ಮಧ್ಯಾಹ್ನ 1:15 ಕ್ಕೆ ನಡೆಯಲಿದೆ. ಮೊದಲ ಪಂದ್ಯ ರದ್ದಾದ ಹಿನ್ನೆಲೆ, ಈಗ ನಾಲ್ಕು ಪಂದ್ಯಗಳು ಮಾತ್ರ ಉಳಿದಿವೆ. ಆದ್ದರಿಂದ ಇಂದಿನ ಗೆಲುವು ಸರಣಿ ಗೆಲ್ಲುವ ಮಾರ್ಗವನ್ನು ಸುಗಮಗೊಳಿಸಲಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ನಾಲ್ಕು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತವು 2 ಪಂದ್ಯಗಳನ್ನು ಗೆದ್ದರೆ, ಆಸ್ಟ್ರೇಲಿಯಾ ಕೇವಲ 1 ಪಂದ್ಯವನ್ನು ಗೆದ್ದಿದೆ ಮತ್ತು ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಇಂದಿನ ಪಂದ್ಯಕ್ಕೆ ಉಭಯ ತಂಡಗಳಲ್ಲಿಯೂ ಯಾವುದೇ ಪ್ರಮುಖ ಬದಲಾವಣೆಗಳ ಸಾಧ್ಯತೆ ಇಲ್ಲ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಮತ್ತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ, ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಸರಣಿಯ ದಿಕ್ಕು ತೀರ್ಮಾನಿಸುವ ಕ್ರೂಷಿಯಲ್ ಕಾದಾಟವಾಗಲಿದೆ.

