Sunday, November 2, 2025

ಒಳಮೀಸಲಾತಿ ಗೊಂದಲಕ್ಕೆ ಶೀಘ್ರ ತೆರೆ? ಅಲೆಮಾರಿಗಳಿಗೆ 1% ಮೀಸಲಾತಿ ಬಗ್ಗೆ ಸಿಎಂ ಮಹತ್ವದ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲೆಮಾರಿ ಸಮುದಾಯಕ್ಕೆ ಶೀಘ್ರದಲ್ಲೇ 1% ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾನೂನು ಇಲಾಖೆ ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯಗಳ ಒಕ್ಕೂಟಗಳ ಜೊತೆ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

“ಅಲೆಮಾರಿಗಳ ಮಹಾಒಕ್ಕೂಟದ ಸಭೆ ನಡೆಸಿದ್ದು, ನಾಗಮೋಹನ್ ದಾಸ್ ವರದಿ ಶಿಫಾರಸಿನಂತೆ 1% ಮೀಸಲಾತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ, ಅಲೆಮಾರಿಗಳಿಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್ ಒದಗಿಸುವಂತೆಯೂ ಕೇಳಿಕೊಂಡಿದ್ದಾರೆ. ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ. 1% ಮೀಸಲಾತಿ ನೀಡುವ ಕುರಿತು ಕಾನೂನು ಇಲಾಖೆ ಮತ್ತು ಕಾನೂನು ತಜ್ಞರ ಜೊತೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಆರ್ಥಿಕ ಪ್ಯಾಕೇಜ್ ಒದಗಿಸಲು ಒಪ್ಪಿದ್ದೇವೆ. ನಿರ್ಧಾರ ಕೈಗೊಳ್ಳಲು ಸ್ವಲ್ಪ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದೇವೆ,” ಎಂದು ಸಿಎಂ ತಿಳಿಸಿದರು. ಇದೇ ವೇಳೆ, ಒಕ್ಕೂಟವು ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಸಿಎಂ ಮನವಿ ಮಾಡಿದ್ದಾರೆ.

ಒಕ್ಕೂಟದ ಪ್ರತಿಕ್ರಿಯೆ:

ಅಲೆಮಾರಿಗಳ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅವರು ಮಾತನಾಡಿ, “ನಾಗಮೋಹನ್ ದಾಸ್ ವರದಿ ಅನ್ವಯ 1% ಮೀಸಲಾತಿ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ 1% ಮೀಸಲಾತಿ ನೀಡುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಅಲ್ಲದೆ, ಪ್ರತ್ಯೇಕ ನಿಗಮ ಸ್ಥಾಪನೆಗೆ ಒಪ್ಪಿದ್ದಾರೆ. ವಿಶೇಷ ಆರ್ಥಿಕ ಪ್ಯಾಕೇಜ್ ಕೋರಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದಷ್ಟೂ ಬೇಗ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದು, ನಾವು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ,” ಎಂದರು.

error: Content is protected !!