ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಮನೆ ಮನೆ ಗಣತಿ ಕಾರ್ಯಕ್ಕೆ ತೆರೆ ಬಿದ್ದಿದೆ.
ಆದ್ರೆ ನ.10ರವರೆಗೂ ಆನ್‌ಲೈನ್ ಸಮೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ರಾಜ್ಯಾದ್ಯಂತ ಈವರೆಗೆ ಶೇ.97.51 (ಜಿಬಿಎ ಹೊರತುಪಡಿಸಿ)ರಷ್ಟು ಸಮೀಕ್ಷೆ ನಡೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ಜಿಬಿಎ ಹೊರತುಪಡಿಸಿ 1.48 ಕೋಟಿ ಕುಟುಂಬಗಳ ಪೈಕಿ 1.46 ಕೋಟಿ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆದಿದೆ. 5.68 ಕೋಟಿ ಜನಸಂಖ್ಯೆ ಪೈಕಿ 5.54 ಕೋಟಿ ಜನರ ಗಣತಿ ಪೂರ್ಣಗೊಂಡಿದೆ.
ಜಿಬಿಎ ವ್ಯಾಪ್ತಿಯಲ್ಲಿ 59 ಲಕ್ಷ ಜನರ ಸಮೀಕ್ಷೆ ಆಗಿರುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ 6.13 ಕೋಟಿ ಜನರ ಸರ್ವೇ ಆಗಿರಬಹುದೆಂದು ತಿಳಿಸಲಾಗಿದೆ.
1.22 ಲಕ್ಷ ಸಿಬ್ಬಂದಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯ ನಡೆದಿದೆ. ಸಮೀಕ್ಷೆಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಲು ಇನ್ನೂ ಅವಕಾಶವಿದ್ದು, ವದಂತಿಗಳಿಗೆ ಕಿವಿಗೊಡದೆ ಗಣತಿಯಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ.
ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್ 18ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಕುಂಟುತ್ತಾ ಸಾಗುತ್ತಿದ್ದ ಹಿನ್ನಲೆ ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ ಕೂಡ ಬರೆದಿದ್ದರು. ನಿಗದಿತ ಗುರಿ 16 ಮನೆಗಳ ಬದಲು ಸರಾಸರಿ 7-8 ಮನೆಗಳ ಸಮೀಕ್ಷೆ ಆಗುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಅದಾಗಿಯೂ ಬಹುತೇಕ ಮನೆಗಳ ಸರ್ವೇ ಬಾಕಿ ಉಳಿದ ಹಿನ್ನಲೆ ಅವಧಿಯನ್ನ ಮತ್ತೆ ಹೆಚ್ಚಿಸಿ ಅಕ್ಟೋಬರ್ 31ಕ್ಕೆ ಡೆಡ್ಲೈನ್ ನೀಡಲಾಗಿತ್ತು. ಇಂದಿಗೆ ಆ ಅವಧಿ ಮುಗಿದ ಹಿನ್ನಲೆ, ಮನೆ ಮನೆಗೆ ತೆರಳಿ ಗಣತಿ ಮಾಡುವ ಕಾರ್ಯವನ್ನ ಅಂತ್ಯಗೊಳಿಸಲಾಗಿದೆ.

