ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಟಿ.ಆರ್. ಮಿಲ್‌ನಿಂದ ಮಕ್ಕಳ ಕೂಟದ ವರೆಗೆ ಸುಮಾರು 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಟಿ.ಆರ್. ಮಿಲ್‌ನಿಂದ ವಿಶಾಲ್ ಮಾರ್ಟ್ ಸಿಗ್ನಲ್ ವರೆಗೆ ಕಾಮಗಾರಿ ನಡೆಯುತ್ತಿದ್ದು, ಏಪ್ರಿಲ್‌ನಲ್ಲೇ ಆರಂಭವಾದರೂ ಆರು ತಿಂಗಳು ಕಳೆದರೂ ಸಹ ಅರ್ಧದಷ್ಟು ಕೆಲಸವೂ ಪೂರ್ಣಗೊಂಡಿಲ್ಲ.
ವೈಟ್ ಟಾಪಿಂಗ್ ಬದಲು ‘ಕಾಂಕ್ರೀಟ್ ಬಾಕ್ಸ್’ ನಿರ್ಮಾಣ!
ಕಾಮಗಾರಿಯನ್ನು ಪರಿಶೀಲಿಸಿದ ಇಂಜಿನಿಯರಿಂಗ್ ತಜ್ಞ ಶ್ರೀಹರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸಂಪೂರ್ಣವಾಗಿ ಅವೈಜ್ಞಾನಿಕ ಕಾಮಗಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಪ್ರಕಾರ, ರಸ್ತೆಯಲ್ಲಿರುವ ಪ್ರತಿ ಮರದ ಸುತ್ತಲೂ ಕಾಂಕ್ರೀಟ್‌ನ ಬಾಕ್ಸ್ ನಿರ್ಮಾಣ ಮಾಡಲಾಗಿದೆ.
“ಈ ಕಾಂಕ್ರೀಟ್ ಬಾಕ್ಸ್‌ಗಳ ನಿರ್ಮಾಣದಿಂದಾಗಿ ವೈಟ್ ಟಾಪಿಂಗ್ ಕಾಮಗಾರಿಯ ನಿಗದಿತ ವೆಚ್ಚಕ್ಕಿಂತ ಹೆಚ್ಚಿನ ಖರ್ಚು ಆಗಲಿದೆ. ಇದರಿಂದ ಹಣ ಮತ್ತು ಸಮಯ ವ್ಯರ್ಥವಾಗುವುದಷ್ಟೇ ಅಲ್ಲದೆ, ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದಲ್ಲಿ, ಕೇಬಲ್‌ಗಳನ್ನು ಹೊರಗೆ ತೆಗೆಯಲು ಈ ಬಾಕ್ಸ್‌ಗಳನ್ನು ಮತ್ತೆ ಕೆಡವಬೇಕಾಗುತ್ತದೆ. ಇಷ್ಟೊಂದು ವೆಚ್ಚ ಮತ್ತು ಗೊಂದಲಗಳಿಗೆ ಕಾರಣವಾಗುವ ಈ ರಸ್ತೆಗೆ ವೈಟ್ ಟಾಪಿಂಗ್ ಅವಶ್ಯಕತೆ ಇರಲಿಲ್ಲ ಮತ್ತು ಇದು ಯಾರದ್ದೋ ಒತ್ತಡಕ್ಕೆ ಮಣಿದು ಮಾಡಲಾಗುತ್ತಿರುವ ಕೆಲಸ” ಎಂದು ಶ್ರೀಹರಿ ಕಿಡಿಕಾರಿದ್ದಾರೆ.
ಒಂಬತ್ತು ತಿಂಗಳುಗಳಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದ್ದರೂ, ಆರಂಭವಾಗಿ ಆರು ತಿಂಗಳು ಕಳೆದರೂ ಪ್ರಗತಿ ಶೂನ್ಯವಾಗಿದ್ದು, 15 ಕೋಟಿ ವೆಚ್ಚದ ಕಾಮಗಾರಿಯ ಗುಣಮಟ್ಟ ಮತ್ತು ಉದ್ದೇಶದ ಬಗ್ಗೆಯೇ ಗಂಭೀರ ಪ್ರಶ್ನೆಗಳು ಎದ್ದಿವೆ.
ರಸ್ತೆ ಗೊಂದಲ: ಸಚಿವರ ಕ್ಷೇತ್ರಗಳ ಗಡಿಯಲ್ಲಿ ‘ಸಾವಿನ ಹೋರಾಟ’
ಇನ್ನೊಂದೆಡೆ, ರಾಜ್ಯದ ಇಬ್ಬರು ಪ್ರಭಾವಿ ಸಚಿವರು ಹಾಗೂ ಸಿಎಂ ಆಪ್ತರಾಗಿರುವ ದಿನೇಶ್ ಗುಂಡೂರಾವ್ (ಚಾಮರಾಜಪೇಟೆ) ಮತ್ತು ಜಮೀರ್ ಅಹಮದ್ ಖಾನ್ (ಗಾಂಧಿನಗರ) ಪ್ರತಿನಿಧಿಸುವ ಕ್ಷೇತ್ರಗಳ ಗಡಿಯಲ್ಲಿರುವ ಪೋಲಿಸ್ ರಸ್ತೆಯ ದುಸ್ಥಿತಿ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯ ಅರ್ಧ ಭಾಗ ಗಾಂಧಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಮತ್ತು ಉಳಿದ ಅರ್ಧ ಭಾಗ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಇಬ್ಬರು ಸಚಿವರು ಸಹ ತಮ್ಮ ಪಾಲಿಗೆ ಬಂದ ರಸ್ತೆಗೆ ಡಾಂಬರ್ ಹಾಕುವ ಬಗ್ಗೆ ಗೊಂದಲದಲ್ಲಿದ್ದಾರೆ. ವರ್ಷಗಳಿಂದ ಡಾಂಬರ್ ಹಾಕದೆ ರಸ್ತೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.
“ಈ ರಸ್ತೆಯಲ್ಲಿ ಓಡಾಡುವುದು ಎಂದರೆ ಸಾವಿನ ಜೊತೆ ಹೋರಾಟ ಮಾಡಿದಂತೆ. ಹಲವು ವರ್ಷಗಳಿಂದ ರಸ್ತೆಯನ್ನು ನಿರ್ಮಿಸಿಲ್ಲ. ಇದು ಬೆಂಗಳೂರಿನ ಮುಖ್ಯ ರಸ್ತೆಯೋ ಅಥವಾ ಹಳ್ಳಿಯ ರಸ್ತೆಯೋ ತಿಳಿಯದಂತಾಗಿದೆ. ಕೆಲಸಕ್ಕೆ ಹೋಗಲು ಇದೊಂದೇ ದಾರಿ ಇರುವುದರಿಂದ ಅನಿವಾರ್ಯವಾಗಿ ಓಡಾಡುತ್ತಿದ್ದೇವೆ” ಎಂದು ವಾಹನ ಸವಾರರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

