Wednesday, November 5, 2025

ದೇವೇಗೌಡರ ಮನವಿಗೆ ಸಿಕ್ಕಿತು ಸ್ಪಂದನೆ: ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ವೈಪರಿತ್ಯ, ಇಳುವರಿ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಕಳೆದ ಕೆಲ ವರ್ಷದಿಂದ ಕರ್ನಾಟಕ ಮಾವು ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೇ ಕಾರಣದಿಂದ ಈ ಬಾರಿಯ ಮಾವಿನ ಸೀಸನ್‌ನಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿತವಾಗಿ ರೈತರು ಕಂಗಾಲಾಗಿದ್ದರು. ಈ ಕುರಿತು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಇದೀಗ ದೇವೇಗೌಡರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಧಾವಿಸಿದೆ.

ಕರ್ನಾಟಕ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅನ್ನೋದು ಕೇಂದ್ರಕ್ಕೆ ಅರಿವಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ 2025–26ನೆ ಮಾರುಕಟ್ಟೆ ಋತುವಿನಲ್ಲಿ ಬೆಲೆ ಕೊರತೆ ಪಾವತಿ (PDP) ಯೋಜನೆಯಡಿಯಲ್ಲಿ ಕ್ವಿಂಟಲ್‌ಗೆ ₹1,616 ಮಾರುಕಟ್ಟೆ ಹಸ್ತಕ್ಷೇಪ ಬೆಲೆಯಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣಿನ ಖರೀದಿಗೆ ಅನುಮೋದನೆ ನೀಡಿದೆ. ಈ ಮೂಲಕ ಕರ್ನಾಟಕ ಮಾವು ಬೆಳೆಗಾರರಿಗೆ ರಿಲೀಫ್ ಸಿಕ್ಕಿದೆ.

ಜೂನ್ ನಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ದೇವೇಗೌಡರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಕರ್ನಾಟಕದ ಮಾವು ಬೆಳೆಗಾರರ ಸಮಸ್ಯೆ ಕುರಿತು ಸುದೀರ್ಘ ಪತ್ರ ಬರೆದಿದ್ದರು. ಇದೇ ವೇಳೆ ಪರಿಹಾರದ ಮಾರ್ಗಗಳನ್ನು ಸೂಚಿಸಿದ್ದರು.

NAFED ಮತ್ತು NCCF ಮೂಲಕ ಮಾವಿನ ಖರೀದಿಗಾಗಿ ಬೆಲೆ ಕೊರತೆ ಪಾವತಿ (PDP) ಮತ್ತು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಯನ್ನು ಪ್ರಾರಂಭಿಸುವಂತೆ ಕೇಂದ್ರವನ್ನು ವಿನಂತಿ ಮಾಡಿದ್ದರು. ದೇವೇಗೌಡರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಇದೀಗ ಕರ್ನಾಟಕದ ಮಾವು ಬೆಳೆಗಾರರಿಗೆ ರಿಲೀಫ್ ಸಿಕ್ಕಿದೆ.

error: Content is protected !!