ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಶ್ರೀಕಾಕುಳುಂ ಜಿಲ್ಲೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ, 9 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.
ಈ ಮಧ್ಯೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಿರುವ ಒಡಿಶಾದ 93 ವರ್ಷ ಹರಿ ಮುಕುಂದ್ ಪಾಂಡ, ಘಟನೆಗೆ ದೇವರನ್ನೇ ಹೊಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹರಿ ಮುಕುಂದ್ ಪಾಂಡ, “ಘಟನೆಗೆ ಯಾರೂ ಜವಾಬ್ದಾರರಲ್ಲ, ಇದು ದೇವರ ಇಚ್ಛೆ” ಎಂದು ಹೇಳಿದರು.
ಕಾರ್ತಿಕ ಏಕಾದಶಿ ದಿನದಂದು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ವೇಳೆ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದೇವಸ್ಥಾನಕ್ಕೆ ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರ ಇರುವುದರಿಂದ, ಎಲ್ಲರೂ ಅದೇ ದ್ವಾರದತ್ತ ಓಡಿಬಂದಿದ್ದು ಕಾಲ್ತುಳಿತಕ್ಕೆ ಕಾರಣವಾಗಿದೆ. ಈ ಘಟನೆಗೆ ಯಾರೂ ಹೊಣೆಗಾರರಲ್ಲ, ಇದು ದೇವರ ಇಚ್ಛೆ ಎಂದು ಹರಿ ಮುಕುಂದ್ ಪಾಂಡ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಕಾಶಿನಬುಗ್ಗಾದಲ್ಲಿರುವ ಈ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸಿದ್ದ ಹರಿ ಮುಕುಂದ್ ಪಾಂಡ, ತಿರುಪತಿಯಲ್ಲಿ ತಮಗೆ ದರ್ಶನಕ್ಕೆ ಅವಕಾಶ ನೀಡದ್ದನ್ನು ಸವಾಲಾಗಿ ಸ್ವೀಕರಿಸಿ ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಉದ್ಘಾಟನೆ ಬಳಿಕ ಇದೇ ಮೊದಲ ಕಾರ್ತಿಕ ಏಕಾದಶಿಯಾಗಿದ್ದ ಕಾರಣ, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

                                    