ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಸ್ಫೋಟವೊಂದರಲ್ಲಿ ಕನಿಷ್ಠ 23 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಮೆಕ್ಸಿಕೋದ ಹರ್ಮೊಸಿಲ್ಲೊ ನಗರದಲ್ಲಿ ನಡೆದಿದೆ. ವಾಲ್ಡೋಸ್ ಸೂಪರ್ ಮಾರ್ಕೆಟ್‌ನಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಮಕ್ಕಳು ಸಹಿತ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಎಕ್ಸ್ ಖಾತೆಯಲ್ಲಿ ಮೃತರ ಕುಟುಂಬಗಳಿಗೆ ತಮ್ಮ ಸಾಂತ್ವನವನ್ನು ತಿಳಿಸಿದ್ದಾರೆ. “ಗಾಯಾಳುಗಳಿಗೆ ಹಾಗೂ ಮೃತರ ಕುಟುಂಬಗಳಿಗೆ ತಕ್ಷಣ ಸಹಾಯ ನೀಡಲು ನಾನು ಆಂತರಿಕ ಕಾರ್ಯದರ್ಶಿ ರೋಸಾ ಐಸ್ಲಾ ರೊಡ್ರಿಗಸ್ ಅವರಿಗೆ ಸೂಚಿಸಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.
ಸ್ಫೋಟದ ಕಾರಣ ಇನ್ನೂ ಸ್ಪಷ್ಟವಾಗದಿದ್ದರೂ, ಪ್ರಾಥಮಿಕ ತನಿಖೆಯ ಪ್ರಕಾರ ಅಂಗಡಿಯಲ್ಲಿ ಸಂಗ್ರಹಿಸಲಾಗಿದ್ದ ಅನಿಲ ಸಿಲಿಂಡರ್ ಸ್ಫೋಟದಿಂದ ಈ ದುರಂತ ಸಂಭವಿಸಿರುವುದಾಗಿ ಶಂಕಿಸಲಾಗಿದೆ. ಸ್ಫೋಟದ ಸಮಯದಲ್ಲಿ ವಿಷಕಾರಿ ಅನಿಲ ಉಸಿರಾಟದಿಂದ ಅನೇಕರಿಗೆ ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ವಿಧಿವಿಜ್ಞಾನ ವೈದ್ಯಕೀಯ ಸೇವೆಯ ಅಟಾರ್ನಿ ಜನರಲ್ ಗುಸ್ತಾವೋ ಸಲಾಸ್ ತಿಳಿಸಿದ್ದಾರೆ.
ಘಟನೆಯ ನಂತರ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತರಲು ಯಶಸ್ವಿಯಾದರು. ಸ್ಥಳೀಯರು ಘಟನೆಯ ಭೀಕರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇಡೀ ನಗರವನ್ನು ಈ ಘಟನೆ ಬೆಚ್ಚಿಬೀಳಿಸಿದೆ.

