Monday, November 17, 2025

ಪ್ರಜಾಪ್ರಭುತ್ವದ ರಕ್ಷಣೆಗಾಗಿ ‘ಡಿಎಂಕೆ ವಾರ್’: ತಮಿಳುನಾಡಿನಲ್ಲಿ SIR ವಿರುದ್ಧ ಸರ್ವಪಕ್ಷಗಳ ಒಗ್ಗಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಮುನ್ನ ಭಾರತೀಯ ಚುನಾವಣಾ ಆಯೋಗ ಘೋಷಿಸಿರುವ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.

ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ಪಕ್ಷದ ಸಂಸದ ಮತ್ತು ಹಿರಿಯ ವಕೀಲ ಎನ್.ಆರ್. ಎಲಾಂಗೊ ಅವರ ಮೂಲಕ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸರ್ವಪಕ್ಷ ಸಭೆಯ ನಿರ್ಧಾರದ ಬಳಿಕ ಕ್ರಮ:

ಚುನಾವಣಾ ಆಯೋಗವು ಎರಡನೇ ಹಂತದ ಎಸ್‌ಐಆರ್ ಪ್ರಕ್ರಿಯೆ ಘೋಷಿಸಿದ ನಂತರ ಎಂ.ಕೆ. ಸ್ಟಾಲಿನ್ ಅವರು ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ, ತಮಿಳುನಾಡು ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾಗುತ್ತಿರುವ ಈ ‘ತರಾತುರಿ’ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಲು ನಿರ್ಧರಿಸಲಾಗಿತ್ತು. ಈ ನಿರ್ಣಯದ ಬೆನ್ನಲ್ಲೇ ಡಿಎಂಕೆ ಈ ಕಾನೂನು ಹೋರಾಟ ಆರಂಭಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸ್ಟಾಲಿನ್, “ತಮಿಳುನಾಡಿನ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮತ್ತು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಉದ್ದೇಶದಿಂದ ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿರುವ ಎಸ್‌ಐಆರ್ ವಿರುದ್ಧ ಒಗ್ಗೂಡಿ ಧ್ವನಿ ಎತ್ತುವುದು ಎಲ್ಲಾ ಪಕ್ಷಗಳ ಕರ್ತವ್ಯ” ಎಂದು ಕಿಡಿಕಾರಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಗೊಂದಲಗಳಿವೆ. ಆದ್ದರಿಂದ ಯಾವುದೇ ಸಮಸ್ಯೆಗಳಿಲ್ಲದೆ ಈ ಎಸ್‌ಐಆರ್ ಅನ್ನು 2026ರ ವಿಧಾನಸಭಾ ಚುನಾವಣೆಗಳ ನಂತರ ನಿಧಾನವಾಗಿ ನಡೆಸಬೇಕು ಎಂಬ ಡಿಎಂಕೆ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದ ಕಾರಣದಿಂದ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.

error: Content is protected !!