January17, 2026
Saturday, January 17, 2026
spot_img

ಹರ್ಮನ್‌ಪ್ರೀತ್ ಕೌರ್ ನಾಯಕತ್ವ ತ್ಯಜಿಸೋಕೆ ಇದೇ ಉತ್ತಮ ಸಮಯ: ಶಾಂತಾ ರಂಗಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಈಗ ಹೊಸ ಚರ್ಚೆಯ ಕೇಂದ್ರವಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ ನಾಯಕತ್ವದ ಫಲವಾಗಿ ಭಾರತ ಕಿರೀಟ ಮುಟ್ಟಿದರೂ, ಈಗ ಅವರ ನಾಯಕತ್ವದಿಂದ ಕೆಳಗಿಳಿಯುವ ಸಮಯ ಬಂದಿದೆ ಎಂದು ಭಾರತದ ಮೊದಲ ಮಹಿಳಾ ಕ್ರಿಕೆಟ್ ಕ್ಯಾಪ್ಟನ್ ಶಾಂತಾ ರಂಗಸ್ವಾಮಿ ಹೇಳಿದ್ದಾರೆ.

ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಹರ್ಮನ್ ಈಗ 36 ವರ್ಷ ವಯಸ್ಸಿನವರು. ಅವರ ನಂತರದ ತಲೆಮಾರಿನ ಆಟಗಾರ್ತಿ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ಹಸ್ತಾಂತರಿಸುವುದು ಭಾರತೀಯ ಕ್ರಿಕೆಟ್‌ನ ಭವಿಷ್ಯಕ್ಕೆ ಒಳಿತು. ತಂಡದ ಯಶಸ್ಸು ಮುಂದುವರಿಯಲು ಯುವ ನಾಯಕತ್ವ ಅಗತ್ಯ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಹರ್ಮನ್‌ಪ್ರೀತ್ ನಾಯಕತ್ವ ತ್ಯಜಿಸಿದರೂ, ಬ್ಯಾಟರ್ ಮತ್ತು ಫೀಲ್ಡರ್ ಆಗಿ ತಂಡಕ್ಕೆ ಮಹತ್ವದ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು. “ನಾಯಕತ್ವದ ಹೊರೆ ಇಳಿದರೆ ಹರ್ಮನ್ ಇನ್ನೂ ಹೆಚ್ಚು ಸ್ವತಂತ್ರವಾಗಿ ಆಡಬಹುದು. ನಾಯಕತ್ವ ತ್ಯಜಿಸಲು ಇದಕ್ಕಿಂತ ಉತ್ತಮ ಸಮಯ ಇರಲಾರದು,” ಎಂದು ಶಾಂತಾ ಹೇಳಿದರು.

ಪುರುಷರ ತಂಡದ ಉದಾಹರಣೆ ನೀಡುತ್ತಾ, ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಶುಭಮನ್ ಗಿಲ್‌ಗೆ ನಾಯಕತ್ವ ಹಸ್ತಾಂತರಿಸಿದಂತೆಯೇ, ಮಹಿಳಾ ತಂಡದಲ್ಲೂ ಇದೇ ರೀತಿಯ ಬದಲಾವಣೆ ಅಗತ್ಯವಿದೆ ಎಂದು ಅವರು ಸೂಚಿಸಿದರು.

ಜೊತೆಗೆ ಶಾಂತಾ ರಂಗಸ್ವಾಮಿ ಭಾರತ ಮಹಿಳಾ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು. ಆಸ್ಟ್ರೇಲಿಯಾದಂತೆ ಪ್ರಾಬಲ್ಯ ಸಾಧಿಸಲು ಬೌಲಿಂಗ್ ವಿಭಾಗದ ಸುಧಾರಣೆ ಮುಖ್ಯವೆಂದು ಅವರು ಹೇಳಿದರು.

Must Read

error: Content is protected !!