Thursday, November 6, 2025

Parenting Tips | ಪ್ರತಿಯೊಂದಕ್ಕೂ ಎದುರುತ್ತರ ಕೊಡೋ ಮಕ್ಕಳನ್ನು ಸಂಭಾಳಿಸೋದು ಕಷ್ಟ ಅಂತೀರಾ?

ಇಂದಿನ ವೇಗದ ಯುಗದಲ್ಲಿ ಪೋಷಕರು ಹೆಚ್ಚು ಕೊಡುತ್ತಿರುವ ದೂರುಗಳೆಂದರೆ “ನಮ್ಮ ಮಕ್ಕಳು ನಮ್ಮ ಮಾತು ಕೇಳೋದಿಲ್ಲ”, “ಎಲ್ಲಾದಕ್ಕೂ ಎದುರುತ್ತರ ಕೊಡುತ್ತಾರೆ” ಅನ್ನೋದು. ಇಂತಹ ಪರಿಸ್ಥಿತಿ ಯಾವುದೇ ಪೋಷಕರಿಗೂ ಕಿರಿಕಿರಿ ಉಂಟಾಗುತ್ತೆ. ಆದರೆ, ಬೆಳೆಯುತ್ತಿರುವ ಮಕ್ಕಳ ನಡವಳಿಕೆಯಲ್ಲಿ ದೈಹಿಕ ಬದಲಾವಣೆಗಳಷ್ಟೇ ಅಲ್ಲ, ಮಾನಸಿಕ ಬದಲಾವಣೆಗಳೂ ಸಹ ಸಂಭವಿಸುತ್ತವೆ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಮಕ್ಕಳು ತಾವು ಸ್ವತಂತ್ರವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಅವರ ಅಹಂಕಾರ ಅಥವಾ ಆತ್ಮಗೌರವವೂ ಬೆಳೆಯಲು ಆರಂಭವಾಗುತ್ತದೆ. ಇದರಿಂದ ಅವರು ತಾಯಿ-ತಂದೆಯ ಮಾತಿಗೆ ಕೆಲವೊಮ್ಮೆ ವಿರೋಧ ವ್ಯಕ್ತಪಡಿಸಬಹುದು. ಈ ಹಂತದಲ್ಲಿ ಪೋಷಕರು ಕೋಪದಿಂದ ಪ್ರತಿಕ್ರಿಯಿಸುವ ಬದಲಿಗೆ ಸಹನೆ ಮತ್ತು ಪ್ರೀತಿಯೊಂದಿಗೆ ಮಕ್ಕಳ ನಡವಳಿಕೆಯನ್ನು ಮಾರ್ಗದರ್ಶನ ಮಾಡಬೇಕು.

ಪೋಷಕರ ಪಾತ್ರ ಇಲ್ಲಿ ಅತ್ಯಂತ ಮಹತ್ವದ್ದಾಗಿರುತ್ತದೆ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲಿಗೆ ಸಮಾಧಾನದಿಂದ ಮಾತನಾಡಬೇಕು. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಗುರುತಿಸಿ ಪ್ರಶಂಸಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜೊತೆಗೆ, ಮಕ್ಕಳಿಗೆ ಸೃಜನಾತ್ಮಕ ಕೆಲಸಗಳನ್ನು ನೀಡುವುದರಿಂದ ಅವರು ಧನಾತ್ಮಕವಾಗಿ ಯೋಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪೋಷಕರು ಕೆಲಸದ ಒತ್ತಡದಿಂದ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿದ್ದರೂ, ದಿನಕ್ಕೆ ಕೆಲವು ಕ್ಷಣಗಳನ್ನು ಅವರಿಗೆ ಮೀಸಲಿಡುವುದು ಅಗತ್ಯ. ಇದರಿಂದ ಮಕ್ಕಳು ಪೋಷಕರ ಪ್ರೀತಿ ಮತ್ತು ಬೆಂಬಲವನ್ನು ಅನುಭವಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಮಕ್ಕಳನ್ನು ಇತರರೊಂದಿಗೆ ಹೋಲಿಸುವ ಅಭ್ಯಾಸವನ್ನು ನಿಲ್ಲಿಸಿ. ಪ್ರತಿಯೊಬ್ಬ ಮಗು ವಿಭಿನ್ನ ವ್ಯಕ್ತಿತ್ವ ಹೊಂದಿದೆ ಎಂಬ ಅರಿವಿನೊಂದಿಗೆ ನಡೆದುಕೊಂಡಾಗಲೇ ಅವರ ನಡವಳಿಕೆಯಲ್ಲಿ ನಿಜವಾದ ಬದಲಾವಣೆ ಕಾಣಬಹುದು.

error: Content is protected !!