ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ. ಈ ವಿಜಯೋತ್ಸವದ ಸಂಭ್ರಮದ ನಡುವೆ, ಸೂರತ್ನ ಖ್ಯಾತ ಕೈಗಾರಿಕೋದ್ಯಮಿ ಮತ್ತು ರಾಜ್ಯಸಭಾ ಸಂಸದ ಗೋವಿಂದ್ ಧೋಲಾಕಿಯಾ ತಮ್ಮ ವಿಶಿಷ್ಟ ರೀತಿಯಲ್ಲಿ ಭಾರತೀಯ ಮಹಿಳಾ ತಂಡವನ್ನು ಗೌರವಿಸುವ ನಿರ್ಧಾರ ಮಾಡಿದ್ದಾರೆ.
ಶ್ರೀ ರಾಮಕೃಷ್ಣ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ಅಧ್ಯಕ್ಷರಾಗಿರುವ ಧೋಲಾಕಿಯಾ, ಟೀಮ್ ಇಂಡಿಯಾದ ಪ್ರತಿಯೊಬ್ಬ ಸದಸ್ಯೆಯಿಗೂ ಕೈಯಿಂದ ತಯಾರಿಸಿದ ನೈಸರ್ಗಿಕ ವಜ್ರಾಭರಣಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಆಟಗಾರ್ತಿಯರ ಮನೆಗಳನ್ನು ಸೌರ ಫಲಕಗಳನ್ನು ನೀಡುವ ಯೋಜನೆಯನ್ನೂ ಅವರು ಪ್ರಕಟಿಸಿದ್ದಾರೆ.
ಧೋಲಾಕಿಯಾ ಅವರು ಫೈನಲ್ ಪಂದ್ಯದ ಮುನ್ನ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಬರೆದ ಪತ್ರದಲ್ಲಿ, “ಟೀಮ್ ಇಂಡಿಯಾ ಆಟಗಾರ್ತಿಯರು ನಮ್ಮ ದೇಶಕ್ಕೆ ಬೆಳಕನ್ನು ತಂದಿದ್ದಾರೆ. ಅವರ ಜೀವನವೂ ಇದೇ ರೀತಿಯಾಗಿ ಸದಾ ಪ್ರಕಾಶಮಾನವಾಗಿರಲಿ” ಎಂದು ಬರೆದಿದ್ದರು. ಅವರ ಪ್ರಕಾರ, ಈ ಉಡುಗೊರೆ ತಂಡದ ಪ್ರತಿಭೆ, ಶ್ರಮ ಮತ್ತು ದೃಢಸಂಕಲ್ಪಕ್ಕೆ ನೀಡುವ ಗೌರವದ ಸಂಕೇತವಾಗಿದೆ.
ಇದಕ್ಕೆ ಪೂರಕವಾಗಿ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಂಡಕ್ಕೆ 51 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಈ ಮೊತ್ತವನ್ನು ಎಲ್ಲಾ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಆಯ್ಕೆ ಸಮಿತಿಯ ಸದಸ್ಯರಿಗೆ ಹಂಚಲಾಗುತ್ತದೆ. ಜೊತೆಗೆ, ಐಸಿಸಿಯು ಭಾರತೀಯ ತಂಡಕ್ಕೆ 39.55 ಕೋಟಿ ರೂಪಾಯಿಗಳ ಬಹುಮಾನವನ್ನು ನೀಡಿದೆ.

