ನಾವು ದೈಹಿಕವಾಗಿ ದುಡಿದರೆ ದೇಹ ದಣಿಯುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿಮ್ಮ ಮೆದುಳು ಕೂಡ ದಿನನಿತ್ಯದ ಒತ್ತಡ, ಚಿಂತೆ ಹಾಗೂ ಭಾವನಾತ್ಮಕ ತೊಳಲಾಟದಿಂದ ಆಯಾಸಗೊಳ್ಳುತ್ತದೆ ಎಂಬುದನ್ನು ಗಮನಿಸಿದ್ದೀರಾ? ಮೆದುಳಿನ ಆಯಾಸವು ಕೇವಲ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿ ಕೂಡ ಪರಿಣಾಮ ಬೀರುತ್ತದೆ. ತಲೆಯಲ್ಲಿ ಭಾರ, ಸಿಡುಕು, ಉದ್ವೇಗ, ಮಾತನಾಡುವ ಆಸೆ ಇಲ್ಲದಿರುವುದು ಇವೆಲ್ಲಾ ಮೆದುಳಿನ ದಣಿವು ಸೂಚಿಸುವ ಲಕ್ಷಣಗಳು. ಈ ಸಂದರ್ಭದಲ್ಲಿ ಮನಸ್ಸು ಹಾಗೂ ಭಾವನಾತ್ಮಕ ಆರೋಗ್ಯದತ್ತ ವಿಶೇಷ ಗಮನ ಹರಿಸುವುದು ಅತ್ಯಂತ ಮುಖ್ಯ.
ಈ ಕಾರಣಗಳಿಂದ ಉಂಟಾಗುತ್ತದೆ ಮಾನಸಿಕ ಆಯಾಸ
ಪ್ರತಿದಿನದ ಕೆಲಸದ ಒತ್ತಡ, ದೀರ್ಘಕಾಲದ ಅನಾರೋಗ್ಯ, ನಿರಂತರ ಔಷಧಿ ಸೇವನೆ, ನಿದ್ರೆ ಕೊರತೆ ಹಾಗೂ ಅತಿಯಾದ ಚಿಂತೆ – ಇವುಗಳೆಲ್ಲಾ ಮಾನಸಿಕ ಆಯಾಸಕ್ಕೆ ಪ್ರಮುಖ ಕಾರಣಗಳು. ಈ ಆಯಾಸವು ನಿಮ್ಮ ಕೆಲಸದ ಗುಣಮಟ್ಟ, ನಿರ್ಧಾರ ಸಾಮರ್ಥ್ಯ ಹಾಗೂ ಒಟ್ಟು ಆರೋಗ್ಯದ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ.
ಆಯುರ್ವೇದದಲ್ಲಿದೆ ಪರಿಹಾರ:
ಆಯುರ್ವೇದದಲ್ಲಿ ಕೆಲವು ಪ್ರಾಕೃತಿಕ ಔಷಧಿಗಳನ್ನು ‘ಮೆದುಳಿನ ಶಕ್ತಿ ಹೆಚ್ಚಿಸುವ ಅಸ್ತ್ರ’ ಎಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವುಗಳು — ಅಶ್ವಗಂಧ, ಬ್ರಾಹ್ಮಿ ಮತ್ತು ಶಂಖಪುಷ್ಪ.
ಅಶ್ವಗಂಧ:
ಇದನ್ನು ದೈವಿಕ ಔಷಧಿ ಎಂದು ಕರೆಯುತ್ತಾರೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ಕೇವಲ ಅನಾರೋಗ್ಯದ ಸಮಯದಲ್ಲಿ ಮಾತ್ರವಲ್ಲ, ದಿನನಿತ್ಯವೂ ಮನಸ್ಸು ಚುರುಕಾಗಿರಲು ಇದರ ಸೇವನೆ ಸಹಾಯಕ.
ಬ್ರಾಹ್ಮಿ:
ಜ್ಞಾಪಕಶಕ್ತಿಯನ್ನು ವೃದ್ಧಿ ಮಾಡುವ ಈ ಔಷಧಿ, ಹಾರ್ಮೋನುಗಳ ಸಮತೋಲನ ಕಾಪಾಡಿ, ಮೆದುಳಿನ ಆಯಾಸವನ್ನು ನಿವಾರಿಸುತ್ತದೆ. ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಕಷ್ಟವಿದ್ದರೆ ಬ್ರಾಹ್ಮಿ ಅತ್ಯುತ್ತಮ ಪರಿಹಾರ.
ಶಂಖಪುಷ್ಪ:
ಇದು ಮನಸ್ಸಿಗೆ ಶಾಂತಿ ನೀಡುವ ಮತ್ತು ಚೈತನ್ಯ ಹೆಚ್ಚಿಸುವ ಔಷಧಿ. ದೇಹ ಮತ್ತು ಮನಸ್ಸು ಎರಡನ್ನೂ ತಾಜಾತನಗೊಳಿಸುತ್ತದೆ.
ಮೆದುಳಿನ ಆಯಾಸವನ್ನು ನಿರ್ಲಕ್ಷಿಸುವುದು ಆರೋಗ್ಯದ ಹಾನಿಗೆ ಕಾರಣವಾಗಬಹುದು. ನಿಯಮಿತ ನಿದ್ರೆ, ಸರಿಯಾದ ಆಹಾರ, ಧ್ಯಾನ ಹಾಗೂ ಈ ಆಯುರ್ವೇದ ಔಷಧಿಗಳ ಬಳಕೆ ಇವುಗಳು ನಿಮ್ಮ ಮೆದುಳಿಗೆ ಹೊಸ ಚೈತನ್ಯ ನೀಡುತ್ತವೆ. ಸಣ್ಣ ಬದಲಾವಣೆಗಳೇ ದೊಡ್ಡ ಮಾನಸಿಕ ಆರೋಗ್ಯದ ಬದಲಾವಣೆಗೆ ದಾರಿ ತೋರಿಸಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

