ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಂಡಲದ ಜೀವಜಗತ್ತು ಅಸಾಧಾರಣ ವೈವಿಧ್ಯತೆಯಿಂದ ಕೂಡಿದೆ. ಪ್ರತಿ ದಿನವೂ ಪ್ರಕೃತಿ ಹೊಸ ಆಕರ್ಷಣೆಯನ್ನು ಪರಿಚಯಿಸುತ್ತಿರುವಂತೆಯೇ, ಕೆಲವೊಮ್ಮೆ ನಿತ್ಯ ಕಾಣದ ಅಪರೂಪದ ಜೀವಿಗಳು ಕಾಣಸಿಕ್ಕಾಗ ಅದು ಸಂಭ್ರಮದ ಕ್ಷಣವಾಗುತ್ತದೆ. ಇತ್ತೀಚೆಗಷ್ಟೇ ದಕ್ಷಿಣ ಸ್ಪೇನ್‌ನ ಕಾಡಿನಲ್ಲಿ ವಿಶ್ವದ ಮೊಟ್ಟಮೊದಲ ಬಿಳಿ ಐಬೇರಿಯನ್ ಲಿಂಕ್ಸ್ (Iberian Lynx) ಪ್ರಾಣಿಯ ವಿಡಿಯೋ ಸೆರೆಹಿಡಿಯಲ್ಪಟ್ಟಿದ್ದು, ಇಂಟರ್ನೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋ ಒಂದರಲ್ಲಿ “ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪ್ಯಾನಿಷ್ ಛಾಯಾಗ್ರಾಹಕರು ಬಿಳಿ ಐಬೇರಿಯನ್ ಲಿಂಕ್ಸ್ ಪ್ರಾಣಿಯ ವಿಡಿಯೋ ಸೆರೆಹಿಡಿದಿದ್ದಾರೆ” ಎಂಬುದಾಗಿದೆ ಶೀರ್ಷಿಕೆ ನೀಡಿದ್ದಾರೆ. ಚುಕ್ಕೆ ಕಾಡುಬೆಕ್ಕಿನ ಪ್ರಜಾತಿಗೆ ಸೇರಿದ ಈ ಬಿಳಿ ಲಿಂಕ್ಸ್ ತನ್ನ ಹೊಳೆಯುವ ಕಣ್ಣುಗಳಿಂದ ನೋಡುಗರ ಮನಸೂರೆಗೊಂಡಿದೆ.
ವಿಶ್ವ ವನ್ಯಜೀವಿ ನಿಧಿ (WWF) ಪ್ರಕಾರ, ಐಬೇರಿಯನ್ ಲಿಂಕ್ಸ್ ಈಗಾಗಲೇ ಅಳಿವಿನ ಅಂಚಿನಲ್ಲಿರುವ ಕಾಡುಬೆಕ್ಕುಗಳಲ್ಲಿ ಒಂದಾಗಿದೆ. ಇದು ಯುರೇಷಿಯನ್ ಲಿಂಕ್ಸ್‌ಗಿಂತ ಚಿಕ್ಕದಾಗಿದ್ದು, ಉದ್ದವಾದ ಕಾಲುಗಳು, ಕಪ್ಪು ತುದಿಯ ಬಾಲ ಮತ್ತು ವಿಶಿಷ್ಟ ಕಪ್ಪು ಕಿವಿಗಳನ್ನು ಹೊಂದಿದೆ. ಈ ಪ್ರಾಣಿಗಳು ಸಾಮಾನ್ಯವಾಗಿ ಕಾಡು ಮೊಲಗಳನ್ನು ಬೇಟೆಯಾಡುತ್ತವೆ. ಕೆಲವೊಮ್ಮೆ ಬಾತುಕೋಳಿ ಮತ್ತು ಚಿಕ್ಕ ಜಿಂಕೆಗಳೂ ಇವುಗಳ ಆಹಾರವಾಗುತ್ತವೆ. ದಿನಕ್ಕೆ ಮೂರು ಮೊಲಗಳವರೆಗೆ ತಿನ್ನುತ್ತದೆ ಎನ್ನಲಾಗುತ್ತದೆ.
ವಿಡಿಯೋದಲ್ಲಿ ಬಿಳಿ ಐಬೇರಿಯನ್ ಲಿಂಕ್ಸ್ ಗಾಂಭೀರ್ಯದಿಂದ ಕುಳಿತುಕೊಂಡು, ಕ್ಯಾಮೆರಾದತ್ತ ನೇರವಾಗಿ ನೋಡುತ್ತಿರುವುದು ಕಾಣುತ್ತದೆ. ಕೆಲವು ಕ್ಷಣಗಳ ಬಳಿಕ ಅದು ಕಾಡಿನೊಳಗೆ ಮರೆಯಾಗುತ್ತದೆ. ಪ್ರಕೃತಿಯ ಈ ಅಪರೂಪದ ಕ್ಷಣವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ವಿಡಿಯೋ ವೀಕ್ಷಿಸಿದ ಅನೇಕರು ಕಾಮೆಂಟ್ ಮಾಡಿದ್ದು “ಈ ದೃಶ್ಯ 3D ಅನಿಮೇಷನ್‌ನಂತಿದೆ” ಎಂದು ಹೇಳಿದರೆ ಮತ್ತೊಬ್ಬರು “ಈ ಪ್ರಾಣಿಯ ಕಣ್ಣುಗಳನ್ನು ನೋಡಿ ಸಾಕು, ಅದ್ಭುತ!” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವು ಮಂದಿ ಈ ಅಪರೂಪದ ಪ್ರಾಣಿಯನ್ನು ಸಂರಕ್ಷಿಸಬೇಕೆಂದು ಕೋರಿದ್ದಾರೆ.

