ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಈಗ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದೆ. ಭಾರತವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಮೊದಲ ಬಾರಿಗೆ ವಿಶ್ವಕಪ್ ಗೆಲುವಿನ ಸಿಹಿ ಅನುಭವಿಸಿದೆ. ಜಯಶಾರಿಂದ ವಿಶ್ವಕಪ್ ಟ್ರೋಫಿಯನ್ನು ಸ್ವೀಕರಿಸಿದ ಕ್ಷಣ ಇಡೀ ದೇಶವನ್ನು ಹೆಮ್ಮೆಗೊಳಿಸಿತು. ಆದರೆ ಈ ಟ್ರೋಫಿಯ ಹಿಂದೆ ಅಚ್ಚರಿ ಹುಟ್ಟಿಸುವ ಒಂದು ವಿಚಾರ ಅಡಗಿದೆ ಅದೇ ಐಸಿಸಿ ಈ ಟ್ರೋಫಿಯನ್ನು ಹಿಂತೆಗೆದುಕೊಳ್ಳಲಿದೆ!
ಐಸಿಸಿ ನಿಯಮದ ಪ್ರಕಾರ, ಚಾಂಪಿಯನ್ ತಂಡಕ್ಕೆ ನೀಡಲಾದ ಟ್ರೋಫಿ ಶಾಶ್ವತವಾಗಿ ಅವರ ಬಳಿಯೇ ಇರೋದಿಲ್ಲ. ಫೋಟೋಶೂಟ್ ಮತ್ತು ಅಧಿಕೃತ ಸಮಾರಂಭದ ಬಳಿಕ, ಆ ಮೂಲ ಟ್ರೋಫಿಯನ್ನು ಐಸಿಸಿ ವಾಪಸ್ ಪಡೆಯುತ್ತದೆ. ಬದಲಿಗೆ ಅದೇ ರೀತಿಯ ಪ್ರತಿಕೃತಿ (Replica) ಟ್ರೋಫಿಯನ್ನು ತಂಡಕ್ಕೆ ನೀಡಲಾಗುತ್ತದೆ. ಈ ನಿಯಮವನ್ನು 26 ವರ್ಷಗಳ ಹಿಂದೆಯೇ ಜಾರಿಗೊಳಿಸಲಾಗಿದ್ದು, ಟ್ರೋಫಿಯ ಕಳ್ಳತನ ಅಥವಾ ಹಾನಿಯನ್ನು ತಡೆಯುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ.
ಮೂಲ ಟ್ರೋಫಿಯನ್ನು ದುಬೈನಲ್ಲಿರುವ ಐಸಿಸಿ ಕಚೇರಿಯಲ್ಲಿ ಇಡಲಾಗುತ್ತದೆ ಮತ್ತು ಮುಂದಿನ ವಿಶ್ವಕಪ್ ಟೂರ್ನಿಯವರೆಗೆ ಅಲ್ಲಿ ಇರುತ್ತದೆ. ಪ್ರತಿ ವಿಶ್ವಕಪ್‌ನಲ್ಲಿ ಅದೇ ಟ್ರೋಫಿಯನ್ನು ಪ್ರದರ್ಶನಕ್ಕೆ ಬಳಸಲಾಗುತ್ತದೆ.
ಮಹಿಳಾ ವಿಶ್ವಕಪ್ ಟ್ರೋಫಿಯ ತೂಕ ಸುಮಾರು 11 ಕಿಲೋ ಮತ್ತು ಎತ್ತರ 60 ಸೆಂಟಿಮೀಟರ್. ಬೆಳ್ಳಿಯ ಮೂರು ಸ್ತಂಭಗಳು ಮತ್ತು ಅದರ ಮೇಲಿನ ಚಿನ್ನದ ಗ್ಲೋಬ್‌ನಿಂದ ವಿನ್ಯಾಸಗೊಳಿಸಲ್ಪಟ್ಟಿರುವ ಈ ಟ್ರೋಫಿ ಅತ್ಯಂತ ವಿಶಿಷ್ಟ.
ಟ್ರೋಫಿಯ ಮೇಲೆ ಎಲ್ಲಾ ಚಾಂಪಿಯನ್ ತಂಡಗಳ ಹೆಸರು ಕೆತ್ತಲಾಗಿದೆ — ಆಸ್ಟ್ರೇಲಿಯಾ (7 ಬಾರಿ), ಇಂಗ್ಲೆಂಡ್ (4 ಬಾರಿ), ನ್ಯೂಝಿಲೆಂಡ್ (1 ಬಾರಿ) ನಂತರ ಈಗ ಭಾರತ ಕೂಡ ತನ್ನ ಹೆಸರನ್ನು ಅಚ್ಚು ಹಾಕಿಸಿಕೊಂಡಿದೆ.

