ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ, ಚೀನಾ ಜೊತೆಗೆ ಪಾಕಿಸ್ತಾನವೂ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪರಮಾಣು ಪರೀಕ್ಷೆಗಳನ್ನು “ಪುನರಾರಂಭಿಸಿದ ಮೊದಲಿಗರು ನಾವಲ್ಲ” ಎಂದು ಪಾಕ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಒಂದು ಸುದ್ದಿವಾಹಿನಿಯಲ್ಲಿ ಮಾತನಾಡಿದ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು, “ಪರಮಾಣು ಪರೀಕ್ಷೆಗಳನ್ನು ಮೊದಲು ನಡೆಸಿದ್ದು ಪಾಕಿಸ್ತಾನವಲ್ಲ, ಅದನ್ನು ಪುನರಾರಂಭಿಸಿದ್ದೂ ನಾವಲ್ಲ” ಎಂದು ಟ್ರಂಪ್ ಅವರ ಆರೋಪವನ್ನು ಬಲವಾಗಿ ತಳ್ಳಿಹಾಕಿದ್ದಾರೆ. ಇತ್ತ ಚೀನಾದ ವಿದೇಶಾಂಗ ಸಚಿವಾಲಯ ಕೂಡ ತಮ್ಮ ಮೇಲೆ ಮಾಡಿದ ನ್ಯೂಕ್ಲಿಯರ್ ಟೆಸ್ಟ್ ಆರೋಪವನ್ನು ನಿರಾಕರಿಸಿದೆ.
ಟ್ರಂಪ್ ಎಚ್ಚರಿಕೆ ಏನು? ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದಂತಹ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿರುವಾಗ, ಅಮೆರಿಕ ಮಾತ್ರ ಸಂಯಮ ತೋರಿಸುವ ದೇಶವಾಗಿ ಉಳಿಯಲು ಸಾಧ್ಯವಿಲ್ಲ. ಪರಿಸ್ಥಿತಿ ಅನಿವಾರ್ಯವಾದರೆ ನಾವೂ ಪರಮಾಣು ಪರೀಕ್ಷೆಗಳನ್ನು ನಡೆಸುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
“ವಿಶ್ವದ ಅನೇಕ ದೇಶಗಳು ಪರಮಾಣು ಬಾಂಬ್‌ಗಳನ್ನು ಪರೀಕ್ಷಿಸುತ್ತಿವೆ. ರಷ್ಯಾ, ಚೀನಾ, ಉತ್ತರ ಕೊರಿಯಾ, ಪಾಕಿಸ್ತಾನ ಕೂಡ ಈ ಕೆಲಸದಲ್ಲಿ ನಿರತವಾಗಿವೆ. ಆದರೂ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನಮ್ಮದು ಮುಕ್ತ ಸಮಾಜ, ನಾವು ಎಲ್ಲವನ್ನೂ ಮಾತನಾಡುತ್ತೇವೆ,” ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕವು ಇತರ ಎಲ್ಲ ದೇಶಗಳಿಗಿಂತ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ, ಇಡೀ ಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ಸಾಮರ್ಥ್ಯ ನಮ್ಮಲ್ಲಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದ್ದಾರೆ. ತಾವು ಈ ವಿಷಯವನ್ನು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಬ್ಬರೊಂದಿಗೂ ಚರ್ಚಿಸಿದ್ದೇನೆ. ಆದರೂ ಅವರು ಪರೀಕ್ಷೆಗಳನ್ನು ಮುಂದುವರೆಸುತ್ತಿದ್ದಾರೆ. “ಪರಿಸ್ಥಿತಿಗೆ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ,” ಎಂದು ಟ್ರಂಪ್ ಜಾಗತಿಕ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ.

