ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ನಡೆದ ಅಪರೂಪದ ನ್ಯಾಯಾಂಗ ಪ್ರಸಂಗವೊಂದರಲ್ಲಿ, ಹತ್ಯೆಯಾದ ವ್ಯಕ್ತಿಯ ಹುಟ್ಟುಹಬ್ಬದ ದಿನದಂದೇ ಅವನ ಹಂತಕರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
2018ರ ಜೂನ್‌ನಲ್ಲಿ ನಡೆದ ಪಾಟ್ನಾ ಮೂಲದ ಸಿದ್ಧಾರ್ಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಹೆಚ್ 59ನೇ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವುದರ ಜೊತೆಗೆ, ಮೃತನ ತಂದೆಗೆ 10,000 ರೂ. ಪರಿಹಾರವನ್ನು ಪಾವತಿಸಲು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
2018ರ ಜೂನ್ 26ರಂದು ರಾತ್ರಿ ಸುಮಾರು 2.45 ರ ಸುಮಾರಿಗೆ, ಸಿದ್ಧಾರ್ಥ್ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಆರೋಪಿಗಳು ಉದ್ದೇಶಪೂರ್ವಕವಾಗಿ ಸಿದ್ಧಾರ್ಥ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಆಗ ಆರೋಪಿಗಳಾದ ಗಿರೀಶ್ ಮತ್ತು ಮಹೇಶ್ ಅವರು ಸಿದ್ಧಾರ್ಥ್‌ಗೆ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದರು.ತೀವ್ರವಾಗಿ ಗಾಯಗೊಂಡಿದ್ದ ಸಿದ್ಧಾರ್ಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ 2018ರ ಜೂನ್ 28ರಂದು ಅವರು ಸಾವನ್ನಪ್ಪಿದ್ದರು. ಘಟನೆ ಬಳಿಕ ಮೈಕೋಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಕೋರ್ಟ್ ತೀರ್ಪು ಮತ್ತು ಪೋಷಕರ ಪ್ರತಿಕ್ರಿಯೆ:
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯವು, ಕೊಲೆಯಾದ ಸಿದ್ಧಾರ್ಥ್ ಅವರ ಜನ್ಮದಿನವಾದ ಅಕ್ಟೋಬರ್ 24ರಂದೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ನ್ಯಾಯಾಲಯದ ಈ ಆದೇಶವನ್ನು ಸ್ವಾಗತಿಸಿದ ಸಿದ್ಧಾರ್ಥ್ ಪೋಷಕರು, “ಮಗನ ಸಾವಿಗೆ ನ್ಯಾಯ ಸಿಕ್ಕಿದೆ, ನಮ್ಮ ನೋವಿಗೆ ಉತ್ತರ ದೊರಕಿದೆ” ಎಂದು ಮೃತನ ತಂದೆ ಕೌಶಲೇಂದ್ರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

