ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸ್ಮೃತಿ ಮಂದಾನ ಅಗ್ರಸ್ಥಾನ ಕಳೆದುಕೊಂಡಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಟಾಪ್ ಸ್ಕೋರರ್ ಆಗಿದ್ದ, ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ ನಂ.1 ಸ್ಥಾನಕ್ಕೆ ಏರಿದ್ದಾರೆ.
ಒಟ್ಟು 571 ರನ್ ಬಾರಿಸುವ ಮೂಲಕ ಮಹಿಳಾ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರ್ತಿ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ಈ ಸಾಧನೆಯು ಅವರ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ 814 ಕ್ಕೆ ಏರಿತು. ಮಂದಾನ 811 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಲ್ಕು ಸ್ಥಾನಗಳ ಜಿಗಿತದೊಂದಿಗೆ 14ನೇ ಸ್ಥಾನಕ್ಕೇರಿದ್ದಾರೆ.
ಆಲ್‌ರೌಂಡರ್ ದೀಪ್ತಿ ಶರ್ಮಾ, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು ಹಿಂದಿಕ್ಕಿ ಆಲ್-ರೌಂಡರ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರು. ಬ್ಯಾಟಿಂಗ್ ಶ್ರೇಯಾಂಕದಲ್ಲಿಯೂ ಪ್ರಗತಿ ಸಾಧಿಸಿ 21 ನೇ ಸ್ಥಾನಿಯಾಗಿದ್ದಾರೆ.
ಶ್ರೀ ಚರಣಿ ಏಳು ಸ್ಥಾನಗಳ ಏರಿಕೆ ಕಂಡು 23 ನೇ ಸ್ಥಾನಕ್ಕೆ ತಲುಪಿದ್ದಾರೆ. ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ದಕ್ಷಿಣ ಆಫ್ರಿಕಾದ ಮರಿಜಾನ್ನೆ ಕಪ್ ಜಾಗತಿಕ ಬೌಲಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದರು. ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಆಲ್‌ರೌಂಡರ್‌ಗಳ ಯಾದಿಯಲ್ಲಿ ಆಸ್ಟ್ರೇಲಿಯಾದ ಆಶ್ಲಿ ಗಾರ್ಡ್ನರ್(498), ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್(441) ಮತ್ತು ವೆಸ್ಟ್ ಇಂಡೀಸ್‌ನ ಹೀಲಿ ಮ್ಯಾಥ್ಯೂಸ್(420) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮ(392) ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ (388) ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

