ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ನೆಲಮಾಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಕಟ್ಟಡದ ಕೇಂದ್ರ ಹವಾನಿಯಂತ್ರಣ ವ್ಯವಸ್ಥೆಯ ದುರಸ್ತಿ ಕಾರ್ಯದ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಹಠಾತ್ ಸ್ಫೋಟದಿಂದ ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಕೀಲರು, ನ್ಯಾಯಾಧೀಶರು ಮತ್ತು ಇತರ ಸಿಬ್ಬಂದಿ ಹೊರಗೆ ಓಡಿ ಹೋಗಿದ್ದಾರೆ.
ನೆಲಮಾಳಿಗೆಯಲ್ಲಿರುವ ಹವಾನಿಯಂತ್ರಣ ಸ್ಥಾವರದ ಬಳಿ ನಿರ್ವಹಣಾ ಕೆಲಸ ಮಾಡುತ್ತಿದ್ದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಸ್ಫೋಟ ನಡೆದ ಸ್ಥಳದ ಬಳಿಯ ನೆಲಮಾಳಿಗೆಯಲ್ಲಿರುವ ಕ್ಯಾಂಟೀನ್ ಅನ್ನು ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ಮಾತ್ರ ಮೀಸಲಿಡಲಾಗಿದೆ. ಇಸ್ಲಾಮಾಬಾದ್ ಐಜಿಪಿ ಅಲಿ ನಾಸಿರ್ ರಿಜ್ವಿ ಅವರು ಸುಪ್ರೀಂ ಕೋರ್ಟ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಯಾಂಟೀನ್‌ನಲ್ಲಿ ಹಲವು ದಿನಗಳಿಂದ ಅನಿಲ ಸೋರಿಕೆಯಾಗುತ್ತಿತ್ತು, ದುರಸ್ತಿ ಕಾರ್ಯದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದರು.

