Wednesday, November 5, 2025

ಪೊಲೀಸ್ ವೈಫಲ್ಯಕ್ಕೆ ಬಲಿಪಶುವಾದ ಉದ್ಯಮಿ: ಪೊಲೀಸ್ ಕಚೇರಿ ಎದುರು ಆತ್ಮಹತ್ಯೆಗೆ ಯತ್ನ!

ಹೊಸದಿಗಂತ ದಾವಣಗೆರೆ:

ವಂಚನೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ತ ಉದ್ಯಮಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ವರದಿಯಾಗಿದೆ.

ಜಿಎಂಸಿ ಸಂಸ್ಥೆ ಮಾಲೀಕ, ಹರಪನಹಳ್ಳಿ ತಾಲ್ಲೂಕಿನ ಗಡಿಗುಡಾಳು ಗ್ರಾಮದ ನಿವಾಸಿ ಜಿ.ಎಂ. ಶಿವಲಿಂಗಯ್ಯ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ರೈತರಿಗೆ ಬಾಕಿ ಇರುವ ಹಣ ಕೊಡಿಸಲು ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಮನನೊಂದು ಶಿವಲಿಂಗಯ್ಯ ಅವರು ಸೋಮವಾರ ಮಧ್ಯಾಹ್ನ ಈ ಕೃತ್ಯಕ್ಕೆ ಮುಂದಾಗಿದ್ದಾರೆ.

ಘಟನೆಯ ವಿವರ:

ಜಿ.ಎಂ. ಶಿವಲಿಂಗಯ್ಯ ಅವರ ಸಂಸ್ಥೆಯು ರೈತರಿಂದ ಮೆಕ್ಕೆಜೋಳ ಮತ್ತು ರಾಗಿ ಖರೀದಿಸುತ್ತಿತ್ತು. ಇದರಲ್ಲಿ ಶಿವಲಿಂಗಯ್ಯ ಅವರ ಪಾಲುದಾರರು ಮತ್ತು ಖಾಸಗಿ ಬ್ಯಾಂಕ್ ಸಿಬ್ಬಂದಿ ಸೇರಿ ಸುಮಾರು 5.75 ಕೋಟಿ ರೂ. ವಂಚನೆ ನಡೆಸಿದ ಬಗ್ಗೆ ದಾವಣಗೆರೆ ಆರ್.ಎಂ.ಸಿ. ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಈಗಾಗಲೇ ಆರೋಪಿಗಳಿಂದ 2.68 ಕೋಟಿ ರೂ. ಹಣವನ್ನು ಸುಮಾರು 180 ರೈತರಿಗೆ ಮರುಪಾವತಿ ಮಾಡಿಸಿದ್ದಾರೆ. ಆದರೆ, ಇನ್ನೂ 150 ರೈತರಿಗೆ ಕೊಡಬೇಕಿದ್ದ 3.07 ಕೋಟಿ ರೂ. ಹಣ ಬಾಕಿ ಇದೆ. ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ಹಸ್ತಾಂತರಿಸಲು ಸಿಐಡಿ ಸಿದ್ಧವಿದ್ದರೂ, ಸ್ಥಳೀಯ ಪೊಲೀಸರು ಉದ್ದೇಶಪೂರ್ವಕವಾಗಿ ಕಾಲಹರಣ ಮಾಡುತ್ತಿದ್ದಾರೆ ಎಂದು ಶಿವಲಿಂಗಯ್ಯ ಅವರು ಈ ಹಿಂದೆ ಆರೋಪಿಸಿದ್ದರು. ರೈತರು ದಿನನಿತ್ಯ ಹಣಕ್ಕಾಗಿ ಕೇಳುತ್ತಿರುವುದರಿಂದ ಊರು ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.

ತಮಗೆ ಬರಬೇಕಾದ ಹಣವನ್ನು ರೈತರಿಗೆ ಕೊಡಿಸಲು ಪರದಾಡುತ್ತಿದ್ದ ಶಿವಲಿಂಗಯ್ಯ ಅವರು ನವೆಂಬರ್ 1 ರಂದು ಎಸ್ಪಿ ಕಚೇರಿ ಎದುರು ಕುಟುಂಬ ಸಮೇತ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು. ಆದರೆ, ರಾಜ್ಯೋತ್ಸವದ ನೆಪವೊಡ್ಡಿ ಪೊಲೀಸರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ್ದರು. ಇದರಿಂದ ತೀವ್ರ ಬೇಸರಗೊಂಡ ಶಿವಲಿಂಗಯ್ಯ ಸೋಮವಾರ ಎಸ್ಪಿ ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಕ್ಷಣವೇ ಪೊಲೀಸರು ಶಿವಲಿಂಗಯ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನ್ಯಾಯ ದೊರಕಿಸಿಕೊಡಲು ಪೊಲೀಸರು ವಿಫಲವಾದರೆ, ತಾವೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವಲಿಂಗಯ್ಯ ಅವರ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಘಟನೆಯು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ನಾಗರಿಕರ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

error: Content is protected !!