Wednesday, November 5, 2025

ಕಬ್ಬಿನ ಬೆಲೆ ಈಗ ನಾಲ್ಕು ಗೋಡೆಗಳ ರಹಸ್ಯ! ರಸ್ತೆಯ ಚರ್ಚೆ ಬೇಡ: ಶಿವಾನಂದ ಪಾಟೀಲ ಕಿವಿಮಾತು

ಹೊಸದಿಗಂತ ವಿಜಯಪುರ:

ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಗಳಿಸುವ ಹೆಚ್ಚುವರಿ ಲಾಭಾಂಶವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಕ್ಕರೆ, ಜವಳಿ, ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಕಬ್ಬು ಬೆಲೆ ನಿರ್ಧಾರವು ನಾಲ್ಕು ಗೋಡೆಗಳ ನಡುವೆ ನಡೆಯುವ ಗಂಭೀರ ಪ್ರಕ್ರಿಯೆಯಾಗಿದ್ದು, ರೈತರು ರಸ್ತೆಯಲ್ಲಿ ಧರಣಿ ನಡೆಸಿ ಚರ್ಚಿಸುವುದಕ್ಕಿಂತ ಸಂಯಮದಿಂದ ಇರಬೇಕು ಎಂದು ಅವರು ಮನವಿ ಮಾಡಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಬ್ಬು ಬೆಳೆಗಾರರ ಧರಣಿ ಕುರಿತು ಪ್ರಸ್ತಾಪಿಸಿ, “ರೈತರು ಮೊದಲು ಪ್ರತಿ ಟನ್‌ಗೆ 3,200 ರೂ. ದರಕ್ಕೆ ಒಪ್ಪಿಕೊಂಡಿದ್ದರೂ, ಈಗ ಪುನಃ ಧರಣಿ ಮುಂದುವರೆಸಿದ್ದಾರೆ. ಕಾರ್ಖಾನೆಗಳ ಸಮಗ್ರ ಲಾಭಾಂಶದ ವಿವರಗಳನ್ನೊಳಗೊಂಡ ಬ್ಯಾಲೆನ್ಸ್ ಶೀಟ್ ಸರ್ಕಾರಕ್ಕೆ ಬಂದ ನಂತರ, ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಬಂದಿದ್ದರೆ ಆ ಅಂಶವನ್ನು ರೈತರಿಗೆ ಕೊಡಿಸಲು ನಾನು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.

ಬೆಂಬಲ ಬೆಲೆ ಇಲ್ಲ, ನಿಗದಿತ ದರ ಖಚಿತ

ಪ್ರತಿ ಟನ್‌ಗೆ 700 ರೂ. ಇದ್ದ ಕಬ್ಬಿನ ಬೆಲೆ ಈಗ ಕಾರ್ಖಾನೆಗಳ ಹೆಚ್ಚಳದಿಂದಾಗಿ ಸುಧಾರಿಸಿದೆ. ಆದರೆ ಕಬ್ಬಿಗೆ ಬೆಂಬಲ ಬೆಲೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ, ಏಕೆಂದರೆ ಈ ಹಿಂದಿನ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಆದರೂ, “ಕೇಂದ್ರ ಸರ್ಕಾರ ನಿಗದಿಗೊಳಿಸಿದ ದರವನ್ನು ಶೇ.100 ಕ್ಕೆ ಶೇ.100 ರಷ್ಟು ಖಂಡಿತಾ ಕೊಡಿಸಿಯೇ ಕೊಡಿಸುವೆ” ಎಂದು ಪಾಟೀಲರು ದೃಢವಾಗಿ ಹೇಳಿದರು.

ಸಮಯ ಮೀರಿದರೆ ರೈತರಿಗೆ ನಷ್ಟ

“ಕಬ್ಬು ಕಟಾವು ಮಾಡಲು ವಿಳಂಬವಾದರೆ, ಕಬ್ಬಿನಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ ರೈತರಿಗೆ ಹಾನಿಯಾಗುತ್ತದೆ ಎಂಬ ಆತಂಕದಿಂದ ಈ ವಿಷಯ ಹೇಳುತ್ತಿದ್ದೇನೆ” ಎಂದ ಸಚಿವರು, ರೈತರು ಒಂದು ಸೂಕ್ತ ನಿರ್ಧಾರಕ್ಕೆ ಬಂದು ಸಮನ್ವಯ ಸಾಧಿಸಬೇಕು ಹೊರತು ಹಾನಿ ಮಾಡಿಕೊಳ್ಳುವುದು ಬೇಡ ಎಂದು ಎಚ್ಚರಿಸಿದರು. ಸೂರ್ಯಕಾಂತಿ, ಮೆಕ್ಕೆಜೋಳದಂತಹ ಬೆಳೆಗಳಿಗೆ ಬೆಲೆ ಇಲ್ಲದ ಪರಿಸ್ಥಿತಿಯಲ್ಲಿ, ಕಬ್ಬಿಗೆ ಬಂದಿರುವ ಒಳ್ಳೆಯ ಬೆಲೆಯನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದರು.

ಕಾರ್ಖಾನೆಗಳಿಗೂ ಸಮಸ್ಯೆಗಳು

ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ ಸಚಿವರು, ಸಾಲ ಮಾಡಿ ಕಾರ್ಖಾನೆಗಳನ್ನು ಸ್ಥಾಪಿಸಿರುವ ಅವರಿಗೆ ಅನೇಕ ತೊಂದರೆಗಳಿವೆ. ಸಕ್ಕರೆ ರಫ್ತು ನಿಲ್ಲಿಸಿರುವುದು ಮತ್ತು ಎಥೆನಾಲ್ ಉತ್ಪಾದನೆ ಕಡಿತಗೊಳಿಸಿರುವುದು ಸೇರಿದಂತೆ ಕೇಂದ್ರ ಸರ್ಕಾರದ ನೀತಿ ನಿಯಮಾವಳಿಗಳನ್ನು ಪರಿಷ್ಕರಿಸುವಂತೆ ಕೋರಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರೇ ಸುದೀರ್ಘ ಪತ್ರ ಬರೆದಿರುವುದನ್ನು ಉಲ್ಲೇಖಿಸಿದರು. ಆದರೆ, ಇಷ್ಟೆಲ್ಲಾ ಇದ್ದರೂ ಸರ್ಕಾರ ಕಾರ್ಖಾನೆಗಳ ಲಾಭಾಂಶಕ್ಕಿಂತ ರೈತರ ಹಿತದ ಬಗ್ಗೆಯೇ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುತ್ತಿದೆ ಎಂದು ಶಿವಾನಂದ ಪಾಟೀಲ ಸಮರ್ಥಿಸಿಕೊಂಡರು.

error: Content is protected !!