Wednesday, November 5, 2025

ನೈಜೀರಿಯಾದ ಕಾನೋ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡ ಕಲರವ

ನಮ್ಮ ತಾಯಿ ನಾಡನ್ನು ಬಿಟ್ಟು ಕೆಲ ವರ್ಷಗಳು ಕಳೆದರೂ ನಮ್ಮ ನಾಡು ನುಡಿಯ ಬಗ್ಗೆ ನಮಗೆ ಹೆಮ್ಮೆ ಗೌರವ ಇರಲೇಬೇಕು. “ಕರ್ನಾಟಕ ಸಂಘ ಕಾನೋ , ನೈಜೀರಿಯದ ನಮ್ಮವರು ಆ ನಿಟ್ಟಿನಲ್ಲಿ ಹಿಂದೆ ಬೀಳದೆ ನೈಜೀರಿಯಾದಲ್ಲೂ ಸಂಭ್ರಮದಿಂದ ಕನ್ನಡರಾಜ್ಯೋತ್ಸವವನ್ನು ಆಚರಿಸಿದರು.

ದೇಶ ನನ್ನದು ನನ್ನದು ನಾಡು ಎನ್ನದ ಮಾನವನೆದೆ ಸುಡುಗಾಡು ದೂರ ದೇಶಕೆ ಹೋದ ಸಮಯದಿ ತನ್ನ ನಾಡನು ನೆನೆನೆನೆದುಬ್ಬದ ಮಾನವನಿದ್ದರೆ ಲೋಕದಲಿ..ವೀರ ನಾಶದಲಿ.. ಎಂಬ ಕವಿವಾಣಿಯಂತೆ ದೂರದ ಪರದೇಶದಲ್ಲಿದ್ದರೂ
ನಮ್ಮ ನಾಡಿನ ಹಬ್ಬ ಹರಿದಿನಗಳಲ್ಲಿ ಅದರ ಹಿರಿಮೆ ಗರಿಮೆಯನ್ನು ಮರೆಯದೆ ನೆನಪಿಸಿ ಸಂಭ್ರಮಿಸಿ ಮೆರೆಯಬೇಕಾದ್ದು ಪ್ರತಿಯೋರ್ವನ ಕರ್ತವ್ಯ ವಾಗಿದೆ.

ಕಾರ್ಯಕ್ರಮದಲ್ಲಿ ಏನೇನಾಯ್ತು?
ನಾವು ಶಾಲೆ ಕಾಲೇಜುಗಳಲ್ಲಿ ಈ ದಿನವನ್ನು ಆಚರಿಸಿದ್ದೆವು.ಆದರೆ ಇಲ್ಲೇ ಹುಟ್ಟಿ ಬೆಳೆದ ನಮ್ಮ ಮಕ್ಕಳು ತಮ್ಮ ನಿಜವಾದ ತಾಯ್ನೆಲದ ಸೊಗಡನ್ನು ಮರೆಯಬಾರದು ಎಂಬ ದ್ರಷ್ಟಿಯಿಂದ ಇದನ್ನು ಆಚರಿಸುತ್ತಿದ್ದೇವೆ ಎನ್ನುತ್ತಾರೆ ಸಂಘದ ಸಂಸ್ಥಾಪಕರಾದ ಶ್ರೀಯುತ ಶರತ್ ಶೆಟ್ಟಿ ಪಡುಪಳ್ಳಿ ಯವರು. “ಕರ್ನಾಟಕ” ಎಂಬ ಪದ ತನ್ನದೇ ಆದ ವಿಶಿಷ್ಟ ಭಾವನೆಯನ್ನು ಹೊಂದಿದೆ. ನೈಜೀರಿಯಾದ ಕಾನೂ ಎಂಬ ರಾಜ್ಯದಲ್ಲಿನ ಎಲ್ಲಾ ಕನ್ನಡಿಗರು ಮತ್ತು ನಮ್ಮತುಳುವರು ಒಟ್ಟು ಸೇರಿ ಆದ ಸಂಘಟನೆಯಾದ ಕರ್ನಾಟಕ ಸಂಘ ಕಾನೂದಲ್ಲಿ ನಡೆದ ಕಾರ್ಯಕ್ರಮದ ಒಂದು ಪಕ್ಷಿ ನೋಟ ಹೀಗಿದೆ.

ಅರಳಿತು ಕನ್ನಡ ಧ್ವಜ
ಕಾನೋದ ಬಿಗ್ ಬೈಟ್ ಹೋಟೆಲ್ ನಲ್ಲಿ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಮೊದಲಿಗೆ ಶರತ್ ಶೆಟ್ಟಿ ಪಡುಪಳ್ಳಿ ಯವರು ಪ್ರಾರ್ಥಿಸಿ ಪ್ರಸ್ತಾವನೆ ಮಾಡಿದರು. ದೇವರಾಜ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಅಲ್ಲಿಯ ಭಾರತೀಯ ಕನ್ನಡಿಗ ಉದ್ಯಮಿ ಅಮರ್ ನಾಥ್ ಮಗಂಟಿ ಹಾಗೂ ಅವರ ಪತ್ನಿ ಅಲ್ಲಿಯದ್ದೇ ಭಾರತೀಯ ಸ್ಕೈ ಲೈನ್ ಎಂಬ ವಿಶ್ವವಿದ್ಯಾನಿಲಯದ ನಿರ್ದೇಶಕರಲ್ಲಿ ಒಬ್ಬರಾದ ಶ್ರೀಮತಿ ಶಾರದಾ ಮಗಂಟಿ ದೀಪ ಪ್ರಜ್ವಲಿಸಿ, ವಿದ್ಯುಕ್ತವಾಗಿ ಕನ್ನಡ ಧ್ವಜವನ್ನು ಅರಳಿಸಿದರು, ಧ್ವಜ ಪ್ರಣಾಮದ ನಂತರ ಎಲ್ಲರೂ ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಿದರು. ನಂತರ
ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿದರು . ಶ್ರೀಯುತ ಮಹಾಂತೇಶ ರವರು ರಾಜ್ಯೋತ್ಸವದ ಹಿನ್ನೆಲೆ ಮತ್ತು ಆಚರಣೆಯ ಔಚಿತ್ಯ ವನ್ನು ತಿಳಿಸಿದರು.

ಕನ್ನಡಿಗರ ಆಚಾರ-ವಿಚಾರ ಅತೀ ಚಂದ
ಮುಖ್ಯ ಅತಿಥಿಗಳು ಶುಭ ಹಾರೈಸಿ, ಭಾರತದಲ್ಲಿ ಕರ್ನಾಟಕ ರಾಜ್ಯವು ಎಲ್ಲಾ ವಿಷಯದಲ್ಲೂ ಹೆಗ್ಗಳಿಕೆ ಯನ್ನು ಗಳಿಸಿದ ರಾಜ್ಯವಾಗಿದ್ದು ನಿಮ್ಮ ಸಂಸ್ಕೃತಿ ಆಚಾರ ವಿಚಾರ ಆಚರಣೆಗಳು ಅತೀ ಚಂದ ಎಂದರು. ನಿಮ್ಮ ಈ ಆಚರಣೆಯಿಂದ ನಿಮ್ಮ ಮುಂದಿನ ಪೀಳಿಗೆಯೂ ಈ ಬಗ್ಗೆ ತಿಳಿಯುವಂತಾಗುತ್ತದೆ. ಇದು ಸ್ತುತ್ಯಾರ್ಹವಾದ ಕೆಲಸ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ, ಮಕ್ಕಳಾದ ಬಿನಾಯ್,ಸಿಯಾ,ಮಯಾಂಕ್, ರೆಯಾಂಶ್, ಪ್ರೀತ್,ಮಾನ್ವೀ,ಪ್ರಾಪ್ತಿ ತಕ್ಷಿಲ್,ಜಿಯಾನ್ ,ಖುಷಿ , ಪ್ರದ್ಯುಶ್ ಭರತನಾಟ್ಯ ,ನೃತ್ಯ,ವೈಯಕ್ತಿಕ ಗೀತೆ, ಸರ್ವಜ್ಞ ನ ವಚನ, ಇತ್ಯಾದಿಯೊಂದಿಗೆ ರಂಜಿಸಿದರು.

ಮಹಿಳಾ ಮಣಿಗಳು
ವಿಶ್ವನಾಥ್ -ಛಾಯಾ ಸತೀಶ್ ಪೂಜಾರಿ -ದೀಪ್ತಿ ,ರೂಪೇಶ್ ಪಿಂಟೋ -ಲಿಡಿಯಾ ಮತ್ತು ಜ್ಯೋತಿ -ಸುಜಿತ್ ರವರು ಶಾಲು ಹಾಕಿ ಅತಿಥಿ ಗಳನ್ನು ಸ್ವಾಗತಿಸಿದರು . ಶ್ರೀ ಕೇತಾನ್ ಶೆಟ್ಟಿ ,ಗಾಡ್ವಿನ್, ಮಹoತೇಶ್, ಪಾವನ ದೇವರಾಜ್, ವಿಜಯ್, ಶ್ರೀಕಾಂತ್, ಶೈಲೇಶ್-ಕೌಶಲ್ಯ , ಸುಕೇಶ್ ಪ್ರತೀಕ್ಷಾ ಮತ್ತು ಕವಿತಾ ಭಾವಿಕ್ ರವರು ಮಕ್ಕಳಿಗೆ ಬಹುಮಾನ ವಿತರಿಸಿದರು. ಮಹೇಶ್ ರವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ದೀಪ್ತಿ ಸತೀಶ್ ಪೂಜಾರಿ ಮತ್ತು ಶ್ರೀಮತಿ ಲಿಡಿಯ ರೂಪೇಶ್ ಪಿಂಟೋ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಕನ್ನಡ ನಾಡಲ್ಲೇ ಇದ್ದೇವೆಂಬ ಭಾವನೆ
ಅಂತೂ ಇಂತೂ ದೇಶ ಭಾಷೆ ನಾಡು ಸಂಸ್ಕೃತಿಗಳ ಪ್ರಭಾವದಿಂದ ಸ್ವಲ್ಪ ದೂರವಾದರೂ ಅದರ ಅಭಾವ ನಮ್ಮ ಮಕ್ಕಳಿಗೆ ಆಗದಿರಲಿ ಎಂಬ ಇಚ್ಚೆ ಯಿಂದ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಬಿಚ್ಚು ಮನಸ್ಸಿನಿಂದ ಭಾಗವಹಿಸಿ ಸಂತೋಷ ಪಟ್ಟರು .ಅವರೇ ಹೇಳುವಂತೆ ಅಲ್ಲಿದ್ದಷ್ಟು ಹೊತ್ತು ಅಲ್ಲಿದ್ದವರೆಲ್ಲಾ ನಾವು ಕರ್ನಾಟದಲ್ಲೇ ಇದ್ದೇವೋ ಎಂಬ ಭಾವನೆಯ ಭ್ರಮಾಧೀನತೆಗೆ ಒಳಗಾದದ್ದಂತೂ ಅಕ್ಷರಸಹ ಸತ್ಯ ಎನ್ನುತ್ತಾರೆ .ಇದು ಖಂಡಿತಾ ಉತ್ಪ್ರೇಕ್ಷೆಯಲ್ಲ!. ಕರ್ನಾಟಕದಲ್ಲಿ ಇಲ್ಲದಿದ್ದರೂ ಈ ಕನ್ನಡ ಹಬ್ಬವನ್ನು ನೈಜೀರಿಯದಲ್ಲೂ ಸಂತೋಷದಿಂದ ಆಚರಿಸಿದ್ದಂತೂ ಸತ್ಯ .

ಈ ಸದವಸರದಲ್ಲಿ ಎಲ್ಲರೂ ತಮ್ಮ ಶಾಲೆಯ ದಿನದ ನೆನಪು ಮಾಡುತ್ತಾ,ನಮ್ಮ ಕಸ್ತೂರಿ ಕನ್ನಡದ ಕಂಪನ್ನು ಮರೆಯದ ಮಾತಾಡಿದುದಕ್ಕಾಗಿ ಸಂತೋಷ ಪಟ್ಟರು. ಕರ್ನಾಟಕಸಂಘದ ಬಂಧುಗಳು ಈ ರಾಜ್ಯೋತ್ಸವದ ಸಂಭ್ರಮಾ ಚರಣೆಯಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದು. ನಾಡು-ನುಡಿ, ನಾಡು-ನುಡಿ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮದೇ ಎಂದು ತಿಳಿದು ಇದರಿಂದ ದೂರ ಸರಿಯದೆ ಇದು ನಮ್ಮ ಕರ್ತವ್ಯವೆಂದು ಬಗೆದು “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ”ಎಂದು ಗುನುಗುನಣಿಸುತ್ತ “ಬಿಗ್ ಬೈಟ್” ರೆಸ್ಟೋರೆಂಟ್ ನಲ್ಲಿ ಸಾಮೂಹಿಕ ಭೋಜನ ಸವಿದರು.

– ಶರತ್ ಶೆಟ್ಟಿ ಪಡುಪಳ್ಳಿ

error: Content is protected !!