ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಬಾರಿ ತಂಡದ ನಾಯಕನಾಗಿ ಸ್ಟೀವ್ ಸ್ಮಿತ್ ನೇಮಕಗೊಂಡಿದ್ದು, ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಗಾಯದ ಕಾರಣದಿಂದಾಗಿ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ.
ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿರುವ ಕಮಿನ್ಸ್ ಸಂಪೂರ್ಣ ಫಿಟ್ ಆಗಿಲ್ಲದ ಕಾರಣ, ನವೆಂಬರ್ 21ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲಾರರು. ಅವರ ಅನುಪಸ್ಥಿತಿಯಲ್ಲಿ ಸ್ಮಿತ್ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಮುಂದಿನ ಪಂದ್ಯಗಳಿಗೂ ಕಮಿನ್ಸ್ ಚೇತರಿಸಿಕೊಳ್ಳದಿದ್ದರೆ, ಸ್ಮಿತ್ ನಾಯಕತ್ವ ಮುಂದುವರಿಯುವ ಸಾಧ್ಯತೆಯಿದೆ.
ಸ್ಟೀವ್ ಸ್ಮಿತ್ ಈಗಾಗಲೇ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಆಸೀಸ್ ತಂಡವು 40 ಟೆಸ್ಟ್ ಪಂದ್ಯಗಳಲ್ಲಿ 23 ಗೆಲುವು ಸಾಧಿಸಿದ್ದು, ಕೇವಲ 10 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಉಳಿದ 7 ಪಂದ್ಯಗಳು ಡ್ರಾಆಗಿ ಅಂತ್ಯಗೊಂಡಿವೆ.
ಈ ಬಾರಿ ಆಯ್ಕೆಯಾದ 15 ಸದಸ್ಯರ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳೂ ನಡೆದಿವೆ. ಯುವ ದಾಂಡಿಗ ಸ್ಯಾಮ್ ಕೋನ್‌ಸ್ಟಾಸ್‌ಗೆ ಅವಕಾಶ ಸಿಕ್ಕಿಲ್ಲ. ಬದಲಾಗಿ ಜೇಕ್ ವೆದರಾಲ್ಡ್ ಮೊದಲ ಬಾರಿಗೆ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಲ್ಲದೆ, ಬ್ರೆಂಡನ್ ಡಾಗೆಟ್ 7 ವರ್ಷಗಳ ನಂತರ ಮತ್ತೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ (ಮೊದಲ ಪಂದ್ಯ):
ಸ್ಟೀವ್ ಸ್ಮಿತ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.
ಈ ಸರಣಿ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ಸಂಭ್ರಮ ತರಲಿದ್ದು, ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬ ಕುತೂಹಲ ಈಗ ಹೆಚ್ಚಾಗಿದೆ.

